भारतीय भाषाओं द्वारा ज्ञान

Knowledge through Indian Languages

Dictionary

Pampana Nudigani (Kannada)

Kamadhenu Pustaka Bhavana

< previous123456789620621Next >

ಅಂಕ

[ನಾ] ಶ್ರೇಷ್ಠ (ನಾಕದ ಫಣಿಲೋಕದ ಅಂಕದ ಪೊೞಲ್ಗಳನೀ ಪೊೞಲೊಂದು ರಮ್ಯಹರ್ಮ್ಯದ ಬೆಲೆಗಂಬರಂ ನೆಱೆಯದು: ಆದಿಪು, ೬. ೮೯ [‘ಅಂಕದ ಪೊೞಲ್‌’ ಎಲ್. ಬಸವರಾಜು ಆವೃತ್ತಿಯಲ್ಲಿ]; ತೊಡೆ (ಜಗತ್ತ್ರಿತಯಪತಿಯಂ ತ್ರಿದಶಪತಿಯ ನೀಡಿದ ಕೇಯೂರರಶ್ಮಿರಂಜಿತ ಭುಜಯುಗಳಕ್ಕೆ ನೀಡಿದಾಗಳ್ .. .. ನಿಜಾಂಕಮನೇಱಿಸಿದಂ: ಆದಿಪು, ೭. ೪೮ ವ); [ನಾ] ಶೌರ್ಯ (ಸಾಗರದೊಳಗಿರ್ದಂಕದ ಮಾಗಧನಂ ಕಟ್ಟಿದಲ್ಲದೆ ಇರಂ ಅರಸಂ ಎನುತ್ತೋಗಡಿಸದೆ ನಡೆದುದು ಬಲಸಾಗರಮಾ ಸಾಗರಂಬರಂ ತರತರದಿಂ: ಆದಿಪು, ೧೨. ೬೮); [ನಾ] ಗುರುತು (ತನ್ನಂಕದೊಂದುಗ್ರಸಾಯಕದಿಂ ನಾಯಕರಂ ಪಡಲ್ವಡಿಸುತುಂ: ಪಂಪಭಾ, ೧. ೭೪); [ನಾ] ಪ್ರಸಿದ್ಧ (ವಿನತಾಪುತ್ರನ ವಜ್ರ ತುಂಡ ಹತಿಗಂ ಮೆಯ್ಯಾಂತು ಕಂಡಂಗಳುಳ್ಳಿನಂ ಅಂಗಂಗಳಂ ಒಡ್ಡಿ ಒಡ್ಡಿ ತನುವಂ ಕೊಟ್ಟಂತು ಜೀಮೂತವಾಹನನೆಂಬ ಅಂಕದ ಚಾಗಿ: ಪಂಪಭಾ, ೪. ೨೬); [ನಾ] ಬಿರುದು (ದನುಜಾಂತಕನೆಂಬೀ ನಿನ್ನ ನಚ್ಚುವೋದ ಅಂಕಂ ಎಲವೊ ಮುನ್ನೆನ್ನನ್ನಂ ದನುಜಂ ಪುಟ್ಟದೆ ಸಂದುದು: ಪಂಪಭಾ, ೬. ೫); [ನಾ] ದ್ವಂದ್ವಯುದ್ಧ (ದೇವರೆಲ್ಲರುಂ ಅಂಬರತಳದೊಳಿರ್ದಂಕಮಂ ನೋೞ್ಪಂತೆ ನೋಡೆ: ಪಂಪಭಾ, ೮. ೨೧ ವ)

ಅಂಕತಳ

[ನಾ] ತೊಡೆಯ ಮೇಲ್ಭಾಗ (ತದಂಗನಾ ಅಂಕತಳದೊಳ್ ಬಾಲಾರ್ಕನಂ ಪೋಲ್ತು ಭಾಸುರತೇಜೋಧಿಕನಪ್ಪ ಬಾಳನಂ ಅೞ್ಕರ್ತು ನೋಡುತ್ತುಂ: ಆದಿಪು, ೭. ೪೪)

ಅಂಕದಂಬು

[ನಾ] ಹೆಸರುವಾಸಿಯಾದ ಬಾಣ (ಅಂಕದಂಬೆತ್ತಲುಂ ತುಱುಗಿ ನಡುವಿನಂ ಸಾರ್ದು ಸಾರ್ದೆಚ್ಚೆಚ್ಚು ಕಾದಿದರ್: ಪಂಪಭಾ, ೧೩. ೩೯)

ಅಂಕಮಾಲಾ

[ನಾ] [ರಾಜರ] ಸ್ತುತಿಮಾಲೆ (ಮಹಾವಂದಿವೃಂದ ಅಂಕಮಾಲಾನಾದಂ ಗಂಭೀರನಾದಂ ನೆಗೞ್ದಿರೆ ತಳರ್ದಂ ರಾಗದಿಂ ಸಾರ್ವಭೌಮಂ: ಆದಿಪು, ೧೧. ೧೪)

ಅಂಕವಣೆ

[ನಾ] ಕುದುರೆಯ ರಿಕಾಪು (ಅನ್ನೆಗಂ ನಕುಳನುಂ ಅಂಕವಣೆಯುಂ ಬಾಳುಂ ಬಾರುಂ ಚಮ್ಮಟಿಗೆಯನುಮಂ: ಪಂಪಭಾ, ೮. ೫೪ ವ)

ಅಂಕಿತ

[ನಾ] ಗುರುತು ಮಾಡಲ್ಪಟ್ಟ (ಆಸೇತೋ ರಾಮಚಾಪ ಅಟನಿತಟಯುಗ ಟಂಕ ಅಂಕಿತ ಆಖಂಡಖಂಡಾತ್: ಪಂಪಭಾ, ೧೪. ೨೭)

ಅಂಕುರ

[ನಾ] ಆಗ ತಾನೆ ಮೂಡಿದ ಮರದ ಟಿಸಿಲು (ಕಳಿಕಾಂಕುರ ಕುಸುಮೋತ್ಕರ ಫಳಪಲ್ಲವರಹಿತ ಮಹಿಜಮಂ ಕಂಡುದಱಿಂ: ಆದಿಪು. ೧೫. ೩೪); ಮೊಳಕೆ, ಚಿಗುರು (ಪೊಸೆದಲ್ಲಿ ಕಾಳಕೂಟ ಅಂಕುರಂ ಅಂದು ಅಸದಳಮೊಗೆದಂತೊಗೆದುವು ಬಸಿಱಿಂ ನೂಱೊಂದು ಪಿಂಡಂ ಅರುಣಾಕೀರ್ಣಂ; ಪಂಪಭಾ, ೧. ೧೩೦)

ಅಂಕುರವೃದ್ಧಿ

[ನಾ] ಮೊಳಕೆಯ ಬೆಳವಣಿಗೆ (ಉದಕವೃದ್ಧಿಯೊಳ್ ಅಂಕುರವೃದ್ಧಿಯೆಂತಂತೆ ಸಹಕಾರಿಕಾರಣಂ: ಆದಿಪು, ೨. ೧೦ ವ)

ಅಂಕುರಶಾಖಾಭಿನಯ

[ನಾ] ಒಂದು ಬಗೆಯ ನೃತ್ಯ? (ಅಂಕುರ ಪಲ್ಲವ ಕುಸುಮಾಳಂಕಾರದ ಚೂತಲತಿಕೆ ನರ್ತಕಿವೋಲ್ ತನ್ನಂಕುರದಿಂ ಶಾಖೆಯಿಂ ಏನಂಕುರಶಾಖಾಭಿನಯಮಂ ಅಭಿನಯಿಸಿದುದೋ: ಆದಿಪು, ೧೧. ೯೪)

ಅಂಕುರಿತ

[ಗು] ಮೊಳಕೆವೊಡೆದು ಚಿಗುರು ಬಿಟ್ಟ (ಕೋರಕಿತ ಅಂಕುರಿತ ಪಲ್ಲವಿತ ಮುಕುಳಿತ ವಿಸ್ತಾರಿತ ರಮ್ಯಾಶೋಕ ಮಹೀರುಹಮುಮಂ ಅಭವನ ಅಂಗರುಚಿ ಪುದಿದಿರ್ಕುಂ : ಆದಿಪು, ೯. ೧೧೧)

ಅಂಕುರಿಸು

[ಕ್ರಿ] ಚಿಗುರು ಮೊಳೆ (ವಜ್ರಜಂಘಚಕ್ರವರ್ತಿ ಸೂಕ್ತಾಮೃತಸಿಕ್ತಮಪ್ಪ ನಿಜಮನೋರಥಾಮರದ್ರುಮದಿಂ ಒಗೆದಂಕುರಿಸಿದ ಅಂಕುರನಿಕರಮಂ: ಆದಿಪು, ೪. ೨೯ ವ); ನವಿರೇಳು (ಬೇಟದೊಳ್ ಬಿರಿವೊಡಲೊಯ್ಯನಂಕುರಿಸೆ: ಪಂಪಭಾ, ೫. ೧೪)

ಅಂಕುಸ

[ನಾ] ನಿಯಾಮಕ (ಪಾಣ್ಬರಂಕುಸಂ ಅಮ್ಮನ ಗಂಧವಾರಣಂ ಪಡೆಮೆಚ್ಚೆಗಂಡಂ: ಪಂಪಭಾ, ೧. ೧೪೮ ವ); [ನಾ] ಅಂಕುಶ (ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ: ಪಂಪಭಾ, ೪. ೩೦)

ಅಂಕುಸವಿಡು

[ಕ್ರಿ] ಅಡ್ಡಿಮಾಡು (ಆರಂಕುಸವಿಟ್ಟೊಡಂ ನೆನವುದೆನ್ನ ಮನಂ ವನವಾಸಿ ದೇಶಮಂ: ಪಂಪಭಾ, ೪. ೩೦)

ಅಂಗ

[ನಾ] ದೇಹದ ಭಾಗ (ಅಂಗೋಪಾಂಗಂಗಳೊಳ್ ಎಸೆವ ಆಂಗಿಕಮಂ ಗಾನಪಾಠ್ಯದೊಳ್ ವಾಚಿಕಮಂ ತುಂಗಕುಚೆ ಮೆಱೆದಳಾ ದಿವಿಜಾಂಗನೆಗೆ ಆಹಾರ್ಯ ಸಾತ್ವಿಕಂ ನಿಜಮೆ ವಲಂ: ಆದಿಪು, ೯. ೨೮); [ನಾ] [ಜೈನ] ಜೈನಾಗಮದ ಒಂದು ವಿಭಾಗ (ಅಂತು ಜೈನದೀಕ್ಷೆಯಂ ಕೈಕೊಂಡು ಗುರುವಿನನುಮತದಿಂ ದ್ವಾದಶಾಂಗ ಚತುರ್ದಶಪೂರ್ವಂಗಳಂ ಕಲ್ತು: ಆದಿಪು, ೧೪. ೧೩೯ ವ); [ನಾ] ದೇಹ (ಮುನಿಮುಖ್ಯಮುಖಾಂಭೋಜೋದರ ನಿರ್ಗತ ಮಂತ್ರಪೂತ ಅಂಗಮಂ ನೃಪನೆಯ್ದಿದಂ ಉದ್ಯತ್ ಶೃಂಗಮಂ ಶತಶೃಂಗಮಂ: ಪಂಪಭಾ, ೧. ೧೧೫)

ಅಂಗಜ

[ನಾ] ಮನ್ಮಥ (ಇವನೆ ವಲಂ ಕೊಂಬುಗೊಂಡ ಅಂಗಜಂ ಮೆಲ್ಲಗೆ ಪಾರ್ದಾರ್ದಾಗಳುಂ ಕಿನ್ನರಯುವತೀವ್ರಾತಮಂ ತನ್ನ ನಲ್ಲಂಬುಗಳಿಂದೆಚ್ಚೆಚ್ಚು: ಪಂಪಭಾ, ೪. ೨೩)

ಅಂಗಜನೆಂಬಜಂ

[ನಾ] ಮನ್ಮಥನೆಂಬ ಬ್ರಹ್ಮ (ಈ ಕನ್ನೆಯಂ ಮಾಡುವಲ್ಲಿಗೆ ಚಂದ್ರಂ ಮಳಯಾನಿಳಂ ಮಳಯಜಂ ನೀರೇಜಂ ಇಮ್ಮಾವು ಮಲ್ಲಿಗೆ ಎಂದಿಂತಿವಂ ಅೞ್ಕಱಿಂದ ಅಮರ್ದಿನೊಳ್ ತಾನೞ್ತಿಯಿಂ ತೊಯ್ದು ಮೆಲ್ಲಗೆ ಸಂದಂಗಜನೆಂಬಜಂ ಪಡೆದಂ: ಪಂಪಭಾ, ೪. ೭೫)

ಅಂಗಜನ್ಮ

[ನಾ] ಮನ್ಮಥ (ಸೆಱೆಗೆಯ್ದು ಕಣ್ಣುಮಂ ಮನಮುಮಂ ಅಂಗಜನ್ಮನರಲಂಬುಗಳಿಂದೆ ಮರುಳ್ಚಿ: ಪಂಪಭಾ, ೨. ೪೦)

ಅಂಗಜಾಸ್ತ್ರ

[ನಾ] ಮನ್ಮಥನ ಬಾಣ (ರಾಜಪುತ್ರಿಸ್ಮಿತ ಮಧುಮಧುರಾಪಾಂಗ ಜೈತ್ರಾಂಗಜಾಸ್ತ್ರಂಗಳ ಕೋಳಂ ನೂತನಪ್ರೇಮದೆ ನಿಮಿರ್ವೆಡೆಯೊಳ್ ಕಾವನಾವಂ: ಆದಿಪು, ೪. ೫೧)

ಅಂಗಜೋತ್ಪತ್ತಿಸುಖ

[ನಾ] ಕಾಮಸುಖ (ಪೂಣ್ದೆನಗಾಗದಂಗಜೋತ್ಪತ್ತಿ ಸುಖಕ್ಕೆ ಸೋಲಲೞಿಗುಂ ಪುರುಷವ್ರತಂ: ಪಂಪಭಾ, ೧. ೭೫)

ಅಂಗಜೋತ್ಪನ್ನ ವಿಮೋಹ

[ನಾ] ಕಾಮದಿಂದಾದ ವ್ಯಾಮೋಹ (ನೃಪತಿ ಬೇಡಿದುದಂ ಕುಡಲೊಲ್ಲದೆ ಅಂಗಜೋತ್ಪನ್ನ ವಿಮೋಹದಿಂದೞಿದಪಂ: ಪಂಪಭಾ, ೧. ೭೨)
< previous123456789620621Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App