Kannada Nighantu by Kannada Sahitya Parishattu : Vol-4
`ತಿರಿಪಃ - ತಿರಿಪ, ರಾಜಾನ್ನ`
ತಿಪ್ಪು, ತಿರಿಂಪು,. ತಿರಿಪ್ಪು, ತಿರಿವು1, ತಿರಿಹು, ತಿರುಂಪು1, ತಿರುಪು1, ತಿರುಪ್ಪು, ತಿರುವು1, ತಿರುಹು1
೧. ಸುತ್ತು ತಿರುಗಿಸು; ಚಕ್ರಾಕಾರವಾಗಿ ಸುತ್ತಿಸು:
ತಿರಿಪಿ [ಪಾಠಾಂ. ರುಪೆ] ಕರ ಚಕ್ರಮಂ ದನುಜರ ತಲೆಗಳನಸುರವೈರಿ ಮುಳಿದಿಡೆ… ನೆಲಕೆ ಬೀೞವೆ ತಲೆಗಳ್
ಕರ್ಪುರದ ಪರಲ್ಗೆ ಬಿರ್ದರಲ್ಗೆ… ದರ್ಪಕಂ ತಿರಿಪುವ ಚಕ್ರದಂತೆ ತಿರಿಯುತ್ತಿರೆ ಮೇಲೆ ಮದಾಳಿಮಾಲೆಗಳ್
ತಿರಿವ ಕುಲಾಲಚಕ್ರಮೆನೆ ಭೂವಳಯಂ ತಿರಿವನ್ನಮಸ್ತ್ರಮಂ ತಿರಿಪಿದಂ
ಕಣ್ಮಸುಕಿ, ತಿರಿಪಿ ನಿಮ್ಮ ನಡುಬೀಡಿನಿನ್, ಪೊಱವೀಡ ಮಂದಿ ಇರ‍್ದೆಡೆಗಳೊಳೆ ಬಿಟ್ಟೆನ್
೨. ಅಲೆಯುವಂತೆ ಮಾಡು; ಸುತ್ತಾಡಿಸು:
ಶಾರ್ದೂಲಾಭೀಲವನಂಗಳೊಳ್ ತಿರಿಪಿದೀಯುರ್ಕೊಂದೆ ಲೆಕ್ಕಂಗೊಳಲ್
ಕೌಂತೇಯರಂ ಮಚ್ಚರದಿಂ ಕಾಂತಾರದೊಳ್ ತಿಱ್ಚನೆ ತಿರಿಪಿದ ಸೊರ್ಕೀಗಳೇನಾದುದು
೩. ಹೊರಳಿಸು; ಬೇರೆ ಕಡೆಗೆ ತಿರುಗಿಸು:
ಅರಸು ಮಾನೆಯುಂ ತಿರಿಪುವರಿಚ್ಛೆ ಎಂಬ ಲೋಕಗಾದೆಯೇಕೆ ಪುಸಿಯಕ್ಕು
ಮೋಕ್ಷಸುಖಕ್ಕೆ ಚಿತ್ತಮಂ ತಿರಿಪುತುಮಿರ್ದ ಜೈನಮುನಿ ಪುಂಗವರಿಂ ಮಿಗಿಲಾರೊ