(ಭೌ) ವಿದ್ಯುತ್ ರೋಧದ ಎಸ್‌ಐ ಏಕಮಾನ. ಪ್ರತೀಕ W. ವಿದ್ಯುದ್ವಾಹಕವೊಂದರ ಎರಡು ಬಿಂದುಗಳ ನಡುವೆ ವಿಭವಾಂತರ ೧ ವೋಲ್ಟ್ ಇದ್ದಾಗ ಅದರಲ್ಲಿ ಹರಿಯುವ ವಿದ್ಯುತ್ ಪ್ರವಾಹ ೧ ಆಂಪೇರ್ ಇದ್ದರೆ ಆಗ ಆ ವಾಹಕದ ರೋಧ ೧ ಓಮ್. ಜರ್ಮನ್ ಭೌತ ವಿಜ್ಞಾನಿ ಗಿಯೋರ್ಗ್ ಓಮ್ (೧೭೮೭-೧೮೫೪) ಗೌರವಾರ್ಥ ಈ ಹೆಸರು
ohm
ಓಯೆಸಿಸ್
(ಭೂ) ಮರಳುಗಾಡಿನ ಮಧ್ಯದಲ್ಲಿರುವ, ಗಿಡಮರ ಗಳಿಂದ ಕೂಡಿದ, ನೀರಿನ ಅನುಕೂಲತೆ ಇರುವ, ಸೀಮಿತ ವ್ಯಾಪ್ತಿಯ, ಫಲವತ್ಪ್ರದೇಶ
oasis
ಓರ್ ಮೀನು
(ಪ್ರಾ) ರೀಗೇಲಿಸಿಡೀ ಕುಟುಂಬಕ್ಕೆ ಸೇರಿದ, ಎಲ್ಲ ಮಹಾಸಾಗರಗಳಲ್ಲೂ ದೊರಕುವ ಮೀನು. ದೇಹವು ಪಟ್ಟಿಯಂತೆ ಬಲು ಉದ್ದ. ಬೆನ್ನಿನ ರೆಕ್ಕೆ ದೇಹದ ಉದ್ದಕ್ಕೂ ವಿಸ್ತರಿಸಿರುತ್ತದೆ. ಮೊದಲ ಕೆಲವು ಎಳೆಗಳು ತಲೆಯ ಮೇಲೆ ಶಿಖೆಯಂತೆ ಎದ್ದುನಿಂತಿರುತ್ತವೆ. ನಡು ರೆಕ್ಕೆಗಳು ಕೊನೆಯಲ್ಲಿ (ದೋಣಿಯ) ಹುಟ್ಟಿನಂತೆ ಚಪ್ಪಟೆಯಾಗಿ ಇರುವುದರಿಂದ ಇದಕ್ಕೆ ಓರ್ (ಹುಟ್ಟು) ಎಂಬ ಈ ಹೆಸರು
oar fish
ಓರಿಯಂಟಲ್ ಅಗೇಟ್
(ಭೂವಿ) ನವರತ್ನಗಳಲ್ಲಿ ಒಂದು. ಚತುಷ್ಕೋನೀಯ ವ್ಯವಸ್ಥೆಯಲ್ಲಿ ಚತುರ್ಮುಖಿ ಇಲ್ಲವೇ ಅಷ್ಟಮುಖಿ ಅಶ್ರಗಗಳಾಗಿ ರೂಪುಗೊಳ್ಳುತ್ತದೆ. ಹೊಳಪಿನ ಅಚ್ಚಗೆಂಪು, ಕಿತ್ತಳೆ ಕೆಂಪು ಅಥವಾ ಹಳದಿ ಬಣ್ಣವುಳ್ಳ ಪಾರಕ ಹರಳು. ರಾಸಾಯನಿಕ ಸೂತ್ರ ZrSiO2 (ಜಿರ್ಕೋನಿಯಮ್ ಸಿಲಿಕೇಟ್). ಕಾಠಿಣ್ಯಾಂಕ ೭.೫. ಸಾಸಾಂ ೪.೭. ಭಾರತ, ಶ್ರೀಲಂಕ, ಮೈನ್ಮಾರ್ (ಬರ್ಮ), ಇಂಡೋಚೀನ ಮುಂತಾದ ಪೂರ್ವದೇಶಗಳಲ್ಲಿ ನದಿಗರಸಿನಲ್ಲೂ ಸಮುದ್ರ ತೀರದ ಮರಳಿನಲ್ಲೂ ದೊರೆಯುತ್ತದೆ
oriental agate
ಓರೆ ಎತ್ತರ
(ಗ) ಲಂಬವೃತ್ತೀಯ ಶಂಕುವಿನಲ್ಲಿ ಶೃಂಗದಿಂದ ಆಧಾರವೃತ್ತದ ಪರಿಧಿ ಮೇಲಿನ ಯಾವುದೇ ಬಿಂದುವಿನ ದೂರ. ಲಂಬ ಪಿರಮಿಡ್‌ನಲ್ಲಿ ಫಲಕಗಳ ಉನ್ನತಿ
slant height
ಓರೆ ಗೇರು
(ತಂ) ಅಕ್ಷಗಳು ಪರಸ್ಪರ ಓರೆಯಾಗಿದ್ದರೂ ಒಂದೇ ಸಮತಲದಲ್ಲಿ ಇರುವ ದಂಡಗಳನ್ನು ಸಂಯೋಜಿಸುವ ಹಲ್ಲುಚಕ್ರ ವ್ಯವಸ್ಥೆ. ಹಲ್ಲು ಗಳನ್ನು ಶಂಕುವಿನ ಆಕಾರ ದಲ್ಲಿ ಕತ್ತರಿಸಿ, ಸಾಮಾನ್ಯವಾಗಿ ಅದಕ್ಕೆ ಲಂಬವಾಗಿ ಅಂಥದೇ ಇನ್ನೊಂದು ಗೇರನ್ನು ಜೋಡಿಸಿ ಇರುವ ಗೇರು. ವಾಟದ ಗೇರು
bevel gear
ಓರೆ ತಲ
(ಗ) ಕ್ಷಿತಿಜೀಯವಲ್ಲದ ಸಮತಲ.
inclined plane
ಓರೆ ಪಟ್ಟೆ ತೆರಪು
(ರ) ಶಕ್ತಿಯ ವಿರುದ್ಧ ಸಂವೇಗದ ನಕ್ಷೆಯಲ್ಲಿ, ಒಂದು ಅರೆವಾಹಕದ, ವಾಹಕ ಪಟ್ಟೆಯ ಕನಿಷ್ಠ ಶಕ್ತಿಯ ಸ್ಥಿತಿ ಮತ್ತು ವೇಲನ್ಸಿ ಪಟ್ಟೆಯ ಗರಿಷ್ಠ ಶಕ್ತಿಯ ಸ್ಥಿತಿಗಳು ಬೇರೆಬೇರೆ ಫೋನನ್ ಸಂವೇಗವನ್ನು ಹೊಂದಿರುವುದು. ಉದಾ: ಸಿಲಿಕಾನ್ ಓರೆ ಪಟ್ಟೆ ತೆರಪು ಹೊಂದಿರುವ ಅರೆವಾಹಕ
indirect bandgap
ಓರೊಮೀಟರ್
(ತಂ) ಸಮುದ್ರ ಮಟ್ಟಕ್ಕೆ ಹೋಲಿಸಿದಂತೆ ಯಾವುದೇ ಸ್ಥಳದ (ವಿಶೇಷವಾಗಿ ಪರ್ವತಗಳಲ್ಲಿ) ಎತ್ತರ ಸೂಚಿಸುವ ಅಳತೆ ಪಟ್ಟಿಯುಳ್ಳ ವಾಯುಭಾರ ಮಾಪಕ