(ವೈ) ಸ್ವ-ಇಚ್ಛೆಯಿಂದ ಚಲಿಸುವ ಎಲ್ಲಾ ಸ್ನಾಯುಗಳು. ಇವು ಸಾಮಾನ್ಯವಾಗಿ ಮಿದುಳಿನ ನಿಯಂತ್ರಣಕ್ಕೆ ಒಳಪಟ್ಟಿದ್ದು ದೇಹದ ಮೂಳೆಗಳಿಗೆ ಅಂಟಿಕೊಂಡು ಇರುತ್ತವೆ. ಮಿದುಳು ಹಾಗೂ ಮಿದುಳು ಬಳ್ಳಿಯಿಂದ ಬರುವ ನರಗಳು, ಮಯಲಿಯನ್‌ಯುಕ್ತ ನರಗಳು, ಈ ಸ್ನಾಯುಗಳಿಂದ ಪೂರೈಕೆಯಾಗಿರುತ್ತವೆ. ಹಾಗಾಗಿ ಇವು ಮಿದುಳಿನ ಆಣತಿಯಂತೆ ಕೆಲಸ ಮಾಡುತ್ತವೆ. ಈ ಸ್ನಾಯುವನ್ನು ಸೂಕ್ಷ್ಮದರ್ಶಕದ ಮೂಲಕ ಅಧ್ಯಯನ ಮಾಡಿದಾಗ ಪ್ರತಿಯೊಂದು ಸ್ನಾಯುಕೋಶವೂ ಉರುಳೆಯಾಕಾರದಲ್ಲಿ ಇರುವುದು ಕಾಣುತ್ತದೆ. ಇದರ ಮೇಲೆ ಅಡ್ಡಡ್ಡವಾಗಿ ಪಟ್ಟಿಗಳು ಇರುತ್ತವೆ. ಒಂದೊಂದು ತಂತುವಿನಲ್ಲೂ ಹಲವಾರು ನ್ಯೂಕ್ಲಿಯಸ್‌ಗಳಿದ್ದು, ಎಲ್ಲ ಸ್ನಾಯುತಂತುಗಳೂ ಪೊರೆಯಿಂದ ಆವೃತ. ರೇಖಿತ ಸ್ನಾಯು. ಪಟ್ಟೆ ಸ್ನಾಯು. ಅಸ್ಥಿ ಸ್ನಾಯು
voluntary muscle
ಐಝಡ್ ಪರೀಕ್ಷೆ
(ತಂ) ಲೋಹ ದಂಡದ ಆಘಾತ ಧಾರಣ ತ್ರಾಣ ಅಳೆಯಲು ಬಳಸುವ ಪ್ರಯೋಗ
izod test
ಐಝಡ್ ಮೌಲ್ಯ
(ತಂ) ಐಝಡ್ ಲೋಲಕ ಸಂಘಟ್ಟನೆ-ಪರೀಕ್ಷಣಾ ಯಂತ್ರದಲ್ಲಿ ಮಾದರಿಯನ್ನು ತುಂಡರಿಸುವಾಗ ಹೀರಿಕೊಳ್ಳಲಾದ ಶಕ್ತಿ
izod value
ಐಡೆಮ್‌ಪೊಟೆಂಟ್
(ಗ) ಸ್ವತಃ ತನ್ನಿಂದಲೇ ಗುಣಿಸಲ್ಪಟ್ಟಾಗ ಬದಲಾಗದ ರಾಶಿ. ಉದಾ: ೧ ಮತ್ತು ಮಾತೃಕೆ . x2 = x ಎಂಬ ಸಮೀಕರಣವನ್ನು ತೃಪ್ತಿಗೊಳಿಸುವಂಥ ಬೀಜಗಣಿತೀಯ ಉಕ್ತಿಯೊಂದರ ಮೂಲ
idempotent
ಐಬಿಸ್
(ಪ್ರಾ) ಸಿಕೋನೈನಿಫಾರ್ಮೀಸ್ ಗಣದ, ತ್ರೆಸ್ ಕಿಯೊರ್ನಿತಿಡೀ ಕುಟುಂಬದ ಹಲವು ಪ್ರಭೇದಗಳ ನೀರು ಹಕ್ಕಿ. ಇದರ ಅನೇಕ ಪ್ರಭೇದಗಳು ಪ್ರಪಂಚದ ನಾನಾ ಭಾಗಗಳಲ್ಲಿ, ಮುಖ್ಯವಾಗಿ ಉಷ್ಣವಲಯ ಪ್ರದೇಶಗಳಲ್ಲಿ ಹರಡಿವೆ. ದೊಡ್ಡ ಗಾತ್ರದ ಹಕ್ಕಿ. ಕೊಕ್ಕು ಉದ್ದ ವಾಗಿದ್ದು ಪಿಕಾಸಿಯ ಅಲಗಿನಂತೆ ಮುಂದಕ್ಕೆ ಬಾಗಿರುತ್ತದೆ. ಕೆಂಪು ರೆಕ್ಕೆ ಪುಕ್ಕಗಳಿಗಾಗಿ ಬೇಟೆ ಆಡಿದುದರ ಫಲವಾಗಿ ಈ ಕೆಂಪು ಹಕ್ಕಿ ಪ್ರಭೇದ ತೀರ ನಶಿಸಿಹೋಗಿದೆ. ಬೆಳ್ಳಕ್ಕಿ
ibis
ಐಬೆಕ್ಸ್
(ಪ್ರಾ) ಕ್ಯಾಪ್ರ ಜಾತಿಗೆ ಸೇರಿದ, ದಕ್ಷಿಣ ಯೂರೋಪ್. ಮಧ್ಯ ಏಷ್ಯ ಹಾಗೂ ಏಷ್ಯ ಮೈನರ್‌ಗಳಲ್ಲಿ ಕಂಡುಬರುವ ಕಾಡುಮೇಕೆಗಳ ಪೈಕಿ ಒಂದು. ಸ್ಥೂಲ ದೃಢ ಮೈಕಟ್ಟು, ಹಿಂದಕ್ಕೆ ಬಾಗಿದ ದೊಡ್ಡ ಕೊಂಬುಗಳು, ಮೈ ತುಂಬ ಒರಟಾದ ಬಿರುಸು ಕೂದಲುಗಳು, ಮೈಯ ಕೆಳ ಭಾಗದಲ್ಲಿ ಸಮೃದ್ಧ ದಟ್ಟ ಮೃದು ತುಪ್ಪಳ ಇರುವುದು ಇದರ ವೈಶಿಷ್ಟ್ಯ
ibex
ಐಯುಪಿಎಸಿ ಪದ್ಧತಿ IUPAC
(ರ) ಇಂಟರ್‌ನ್ಯಾಷನಲ್ ಯೂನಿಯನ್ ಆಫ್ ಪ್ಯೂರ್ ಅಂಡ್ ಅಪ್ಲೈಡ್ ಕೆಮಿಸ್ಟ್ರಿ ಸಂಸ್ಥೆಯು ಆಗಾಗ ಬದಲಿಸುವಂಥ ರಾಸಾಯನಿಕ ನಾಮ ನಿರ್ದೇಶನವನ್ನು ಪ್ರಮಾಣವಾಗಿಸುವ ವ್ಯವಸ್ಥೆ
system
ಐರಿಸ್
(ಸ) ಇರಿಡೇಸೀ ಕುಟುಂಬಕ್ಕೆ ಸೇರಿದ ಪದ್ಮ ಪುಷ್ಕರ ಎಂಬ ಸಸ್ಯವನ್ನೊಳಗೊಂಡ, ಗಡ್ಡೆ ಬೇರು, ಕತ್ತಿಯಾಕಾರದ ಎಲೆಗಳು ಮತ್ತು ಬಣ್ಣ ಬಣ್ಣದ ಬೆಡಗಿನ ಹೂಗಳುಳ್ಳ ಹಲವು ಗಿಡಗಳ ಜಾತಿ. (ಭೂವಿ) ಒಳಗೆ ಇರುವ ಸೀಳಿಕೆಗಳ ಪರಿಣಾಮವಾಗಿ ವಿವಿಧ ಬಣ್ಣಗಳನ್ನು ಪ್ರತಿಫಲಿಸುವ ಒಂದು ಬಗೆಯ ಶಿಲಾ ಸ್ಫಟಿಕ. (ತಂ) ಕ್ಯಾಮರಾಗಳಲ್ಲಿ ಒಳ ಹೊಗುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸಲು ಹೆಚ್ಚುಕಡಿಮೆ ಮಾಡ ಬಹುದಾದ ರಂಧ್ರವುಳ್ಳ ಒಂದು ಬಗೆಯ ತೆಳು ಲೋಹೀಯ ಪಟಲ. (ವೈ) ಕಣ್ಣಿನ ಪಾರಪಟಲ (ಕಾರ್ನಿಯ) ಹಾಗೂ ಮಸೂರದ ನಡುವೆ ಇರುವ ಹಿಗ್ಗಿ ಕುಗ್ಗ ಬಲ್ಲ ಪೊರೆ. ಇದು ಕಣ್ಣಿನ ಜಲದ್ರವದೊಳಗೆ ಇಳಿ ಬಿದ್ದಿರುತ್ತದೆ. ಇದರ ಮುಂಭಾಗವನ್ನು ಮುಂಗೋಣೆ (ಆಂಟೀರಿಯರ್ ಚೇಂಬರ್) ಹಾಗೂ ಹಿಂಭಾಗ ವನ್ನು ಹಿಂಗೋಣೆ (ಪ್ರೊಸ್ಟೀರಿಯರ್ ಚೇಂಬರ್) ಎಂದು ಕರೆಯ ಲಾಗುತ್ತದೆ. ಈ ಪೊರೆಯ ನಡುವೆ ಪಾಪೆ (ಪ್ಯೂಪಿಲ್) ಇರುತ್ತದೆ. ಪಾಪೆ ಪೊರೆ ತನ್ನ ನಮ್ಯತಾ ಗುಣದಿಂದ ಹಿಗ್ಗಿ ಕುಗ್ಗಿದಾಗ ಪಾಪೆಯ ವ್ಯಾಸ ಹೆಚ್ಚು ಕಡಿಮೆಯಾಗುತ್ತದೆ. ಆಗ ಮಸೂರದ ಮೂಲಕ ಒಳಬರುವ ಬೆಳಕಿನ ಪ್ರಮಾಣ ನಿಯಂತ್ರಿತವಾಗುತ್ತದೆ. ಕಣ್ಣು ಗುಡ್ಡೆಯ ಬಣ್ಣಕ್ಕೆ ಪಾಪೆಪೊರೆಯ ಬಣ್ಣವೇ ಕಾರಣ. ಕನೀನಿಕೆ. ಕನೀನಿಕಾ ಪಟ. ಕರಿಯಾಲಿ. ಕಣ್ಪೊರೆ
iris
ಐಲಾಂತಸ್ ಪತಂಗ
(ಪ್ರಾ) ನಾಕ್ಟೂಯಿಡೀ ಕುಟುಂಬಕ್ಕೆ ಸೇರಿದ ಚಿಟ್ಟೆ. ಎಲಿಗ್ಮ ನಾರ್ಸಿಸಸ್ ವೈಜ್ಞಾನಿಕ ನಾಮ. ಬಹುಮಟ್ಟಿಗೆ ನಿಶಾಚರಿ ಮಾಸಿಮರದ (ಐಲಾಂತಸ್ ಎಕ್ಸೆಲ್ಸ) ಎಲೆಗಳನ್ನು ತಿಂದು ಹಾಳು ಮಾಡುವ ಇದಕ್ಕೆ ಆ ಮರದ ಹೆಸರನ್ನೇ ಕೊಡಲಾಗಿದೆ
ailanthus moth
ಐಸಿಂಗ್ಲಾಸ್
(ರ) ಕೆಲವು ಬಗೆಯ ಸಿಹಿನೀರು ಮೀನುಗಳಿಂದ ತಯಾರಿಸಿದ, ಜೆಲ್ಲಿ. ಅಂಟು ಮೊದಲಾದವನ್ನು ತಯಾರಿಸಲು ಬಳಸುವ ಒಂದು ಬಗೆಯ ಜೆಲೆಟಿನ್. ಮೀನಂಟು. ಮೀನು ವಜ್ರ