(ಪ್ರಾ) ಸರ್ವಿಡೀ ಕುಟುಂಬಕ್ಕೆ ಸೇರಿದ ಜಿಂಕೆ. ಜಿಂಕೆಗಳಲ್ಲೆಲ್ಲ ಬಲು ದೊಡ್ಡ ಗಾತ್ರದ್ದು. ಉತ್ತರವಲಯಗಳಲ್ಲಿ ಕಂಡುಬರುತ್ತದೆ. ಆಲ್ಸಸ್ ಆಲ್ಸಸ್ ಹಾಗೂ ಸರ್ವಸ್ ಕೆನಡೆನ್ಸಿಸ್ ಎಂಬ ಎರಡು ಪ್ರಭೇದಗಳ ಜಿಂಕೆಗಳಿಗೆ ಈ ಹೆಸರು ಅನ್ವಯ. ಉತ್ತರ ಅಮೆರಿಕದಲ್ಲಿ ಇದನ್ನು ಮೂಸ್ ಎಂದೂ ವಾಪಿಟ್ಟಿ ಎಂದೂ ಕರೆಯುವುದುಂಟು. ಉದ್ದ ಕಾಲು, ಮೋಟು ಕೊರಳು. ಚೆನ್ನಾಗಿ ಬೆಳೆದ ಎಲ್ಕ್ ೨ ಮೀ ಎತ್ತರವಿರುತ್ತದೆ. ೫೦೦ ಕಿಗ್ರಾಂ ತೂಗುತ್ತದೆ. ಕೊಂಬುಗಳು ೧.೫ ಮೀವರೆಗೆ ಪಸರಿಸುತ್ತವೆ
elk
ಎಲ್ಮ್
(ಸ) ಅಲ್ಮೇಸೀ ಕುಟುಂಬ, ಅಲ್ಮಸ್ ಜಾತಿಗೆ ಸೇರಿದ ಗಿಡ. ಉತ್ತರ ಯೂರೋಪಿನಲ್ಲೂ ಸಮಶೀತೋಷ್ಣ ಪ್ರದೇಶಗಳ ಬೆಟ್ಟಗುಡ್ಡಗಳಲ್ಲಿ ಬೆಳೆಯುತ್ತದೆ. ೧೪೦ ವರ್ಷ ಬಾಳುವುದು. ೧೮-೩೦ ಮೀ. ಎತ್ತರಕ್ಕೆ ಬೆಳೆಯು ತ್ತದೆ. ನೀರಿನಡಿಯೂ ದೀರ್ಘ ಬಾಳಿಕೆಗೆ ಹೆಸರುವಾಸಿ. ಹೇರು ಬಂಡಿ, ಶವದಾನಿ, ಕೃಷಿ ಉಪಕರಣ, ನೌಕೆಗಳ ನಿರ್ಮಾಣದಲ್ಲಿ ಬಳಕೆ
elm
ಎಲಿನ್ವಾರ್
(ತಂ) ಶೇ.೩೬ ನಿಕ್ಕಲ್ ಮತ್ತು ಶೇ.೧೨ ಕ್ರೋಮಿಯಮ್ ಒಳಗೊಂಡಿರುವ ಉಕ್ಕು. ಪರಿಸರದಲ್ಲಿ ಉಂಟಾಗಬಹುದಾದ ಉಷ್ಣತಾ ಬದಲಾವಣೆಗಳು ಇದರ ಸ್ಥಿತಿಸ್ಥಾಪಕತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಗಡಿಯಾರಗಳ ಗತಿ ನಿಯಂತ್ರಕ ಚಕ್ರಗಳನ್ನು (ಹೇರ್‌ಸ್ಪ್ರಿಂಗ್ಸ್) ಮಾಡಲು ಪ್ರಶಸ್ತ
elinvar
ಎಲಿವೇಟರ್
(ತಂ) ನೋಡಿ : ಎತ್ತುಗ
elevator
ಎಲುಬಿನ ಉರಿಯೂತ
(ವೈ) ಎಲುಬಿಗೆ ಪೆಟ್ಟು ಬಿದ್ದಾಗ ಅಥವಾ ಸೋಂಕು ತಗಲಿದಾಗ ಅದರಿಂದಾಗುವ ನೋವು ಉರಿಗಳಿಂದ ಕೂಡಿದ ಊತ
osteitis
ಎಲುಬು
(ಪ್ರಾ) ಸಂಯೋಜಕ ಊತಕದ ಒಂದು ಬಗೆ. ಇದರ ತಿರುಳು ಮುಖ್ಯವಾಗಿ ಫಾಸ್ಫೇಟ್ ಮತ್ತು ಕಾರ್ಬೊನೇಟ್ ಎಂಬ ಲವಣಗಳಿಂದಾಗಿದೆ. ಪ್ರಾಣಿಯ ದೇಹಕ್ಕೆ ದೃಢತೆ ಒದಗಿಸುವ ಗಟ್ಟಿ ಘಟಕ. ಮೂಳೆ. ಅಸ್ಥಿ
bone
ಎಲೆ
(ಸ) ನಾಳ ಸಸ್ಯಕಾಂಡಗಳ ಮೇಲೆ ಆಚೀಚೆ ಚಾಚಿಕೊಂಡು ಬೆಳೆಯುವ ಪ್ರಮುಖ ಸಸ್ಯಾಂಗ. ಇದರಲ್ಲಿ ಪತ್ರಹರಿತ್ತು (ಕ್ಲೋರೊಫಿಲ್) ಇರುವುದರಿಂದ ಇದರ ಬಣ್ಣ ಸಾಮಾನ್ಯವಾಗಿ ಹಸಿರು. ಎಲೆಯ ಪ್ರಧಾನ ಕಾರ್ಯ ದ್ಯುತಿ ಸಂಶ್ಲೇಷಣೆ ಮತ್ತು ಬಾಷ್ಪ ವಿಸರ್ಜನೆ. ಎಲೆಯಲ್ಲಿ ಬುಡ, ತೊಟ್ಟು ಮತ್ತು ಅಲಗು ಉಂಟು. ಅಲಗಿನಲ್ಲಿ ಎದ್ದುಕಾಣುವ ವಿನ್ಯಾಸವಿದೆ. ಕೆಲವು ಬಗೆಯ ಸಸ್ಯಗಳಲ್ಲಿ ಎಲೆಗಳ ಅಂಚುಗಳಲ್ಲಿ ಮೊಗ್ಗುಗಳು ಹುಟ್ಟಿ, ಕೆಲ ಕಾಲಾನಂತರ ಕಳಚಿ ನೆಲಕ್ಕೆ ಬಿದ್ದು ಸಂತಾನವೃದ್ಧಿಯಲ್ಲಿ ನೆರವಾಗುವುದುಂಟು.
leaf
ಎಲೆಕಂಕುಳು
(ಸ) ಎಲೆಗೂ ಅದು ಚಿಗುರಿರುವ ಕಾಂಡಕ್ಕೂ ನಡುವಿನ ಭಾಗ
leaf axil
ಎಲೆಕಿವಿ
(ಸ) ಎಲೆಯ ಅಥವಾ ಅದರ ತೊಟ್ಟಿನ ಬುಡದಲ್ಲಿ ಇರುವ ಹಸುರು ಬಣ್ಣದ ಹೊರಚಾಚು. ಎಲೆಯಂತೆ, ಹುರುಪೆ ಯಂತೆ ಇರಬಹುದು. ಇದು ದ್ಯುತಿ ಸಂಶ್ಲೇಷಣೆಯನ್ನೂ ನಿರ್ವಹಿಸ ಬಹುದು ಅಥವಾ ಕಂಕುಳು ಮೊಗ್ಗುಗಳಿಗೆ ರಕ್ಷಣೆ ಒದಗಿಸಬಹುದು
stipule
ಎಲೆಕೀಟ
(ಪ್ರಾ) ಆರ್ತಾಪ್ಟರ ಗಣದ, ಫ್ಯಾಸ್ಮಿಡೀ ಕುಟುಂಬಕ್ಕೆ ಸೇರಿದ ಸಸ್ಯಾಹಾರಿ ಕೀಟ. ಬಾಹ್ಯರೂಪದಲ್ಲಿ ಇದು ಎಲೆಯನ್ನು ನವುರಾಗಿ ಹೋಲುವುದರಿಂದ ಈ ಹೆಸರು ಬಂದಿದೆ. ಕಡ್ಡಿ ಕೀಟಕ್ಕೆ (ವಾಕಿಂಗ್ ಸ್ಟಿಕ್) ಸಮೀಪ ಸಂಬಂಧಿ