logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಉಲ್ಕೆ
(ಖ) ಅಂತರಗ್ರಹ ಸಂಚಾರಿ ಜಡಕಾಯವೊಂದು ಅಕಸ್ಮಾತ್ ಭೂಗುರುತ್ವ ಕ್ಷೇತ್ರದಿಂದ ಆಕರ್ಷಿಸಲ್ಪಟ್ಟುದಾದರೆ ಆಗ ಅದು ವೇಗೋತ್ಕರ್ಷಸಹಿತ ಭೂಮಿಯತ್ತ ಧಾವಿಸುತ್ತದೆ. ವಾಯು ಮಂಡಲದ ಅಣುಗಳೊಡನೆ ಸಂಭವಿಸುವ ತಿಕ್ಕಾಟದಿಂದ ಉಷ್ಣ ಸಂಜನಿಸಿ ಅತಿ ಶೀಘ್ರದಲ್ಲೇ ಅದು ಉರಿದು ಭಸ್ಮೀಭೂತವಾಗಿ ಹೋಗುವುದು. ಅದು ಉರಿಯುವಾಗ ರೇಖಿಸುವ ಪಥ ಬಾನಿನಡ್ಡ ಎಳೆದ ಬೆಂಕಿ ಗೆರೆಯಂತೆ ಕಾಣುವುದು. ಈ ದಹನ ವಿದ್ಯಮಾನವೇ ಉಲ್ಕೆ. ಇದಕ್ಕೆ ಮೊದಲಿನ ಸ್ಥಿತಿ ಕೇವಲ ಜಡಕಾಯ-ಉಲ್ಕಾಕಲ್ಪ. ದಹನಾನಂತರ ಶೇಷವೇನಾದರೂ ನೆಲಕ್ಕೆ ಬಡಿದು ಉಳಿದರೆ ಅದು ಉಲ್ಕಾಪಿಂಡ. ಬೀಳುವ ನಕ್ಷತ್ರ ಎನ್ನುವುದು ರೂಢಿಯ ತಪ್ಪು ಕಲ್ಪನೆ
meteor

ಉಲ್ಬ
(ವೈ) ಮಾಸು. ಉನ್ನತ ವರ್ಗದ ಕಶೇರುಕಗಳಲ್ಲಿ ಭ್ರೂಣದ ಹೊರ ಪೊರೆ. ಕೀಟದ ಮೊಟ್ಟೆಯ ಹೊರ ಪೊರೆ
chorion

ಉಲ್ಬಣತೆ
(ವೈ) ರೋಗ ತೀವ್ರತೆಯ ಹೆಚ್ಚಳ ಅಥವಾ ಅದರ ಲಕ್ಷಣಗಳು ಉಗ್ರವಾಗಿ ಕಾಣಿಸಿಕೊಳ್ಳುವುದು
exacerbation

ಉಷ್ಟ್ರಪಕ್ಷಿ
(ಪ್ರಾ) ಸ್ಟ್ರೂತಿಯಾನಿಫಾರ್ಮೀಸ್ ಗಣದ ಸ್ಟ್ರೂತಿ ಯಾನಿಡೀ ಕುಟುಂಬಕ್ಕೆ ಸೇರಿದ ಮಧ್ಯಜೀವಿ ಕಲ್ಪದ ಅಂತ್ಯದಲ್ಲಿ ಕಾಣಿಸಿಕೊಂಡ, ಬದುಕಿರುವ ಅತಿ ದೊಡ್ಡ, ಹಾರಲಾರದ ಆದರೆ, ವೇಗವಾಗಿ ಓಡುವ ಪಕ್ಷಿ. ಸ್ಟ್ರೂತಿಯೋ ಕಮೀಲಸ್ ವೈಜ್ಞಾನಿಕ ನಾಮ. ಅರೇಬಿಯ ಮತ್ತು ಆಫ್ರಿಕ ಮರಳುಗಾಡುಗಳಲ್ಲಿ ವಾಸ. ಮೃದುವಾದ ಗರಿಗಳು, ಬೋಡು ತಲೆ, ಕತ್ತು ಹಾಗೂ ಕಾಲುಗಳು, ಪುಟ್ಟ ರೆಕ್ಕೆಗಳು, ದಪ್ಪ ಬಲಿಷ್ಠ ಕಾಲುಗಳು, ಒಂದೊಂದು ಕಾಲಿನಲ್ಲೂ ಎರಡೆರಡು ಬೆರಳುಗಳು ಇರುವ, ಸರ್ವಭಕ್ಷಕಗಳಾದರೂ ಸಾಮಾನ್ಯ ವಾಗಿ ಗಿಡ ಗಂಟೆಗಳನ್ನೇ ತಿನ್ನುವ, ಈ ಗಣದ ಏಕೈಕ ಜೀವಂತ ಪ್ರಭೇದದ ಪಕ್ಷಿ. ಗರಿಗಳು ಅಲಂಕಾರಕ್ಕೆ ಬಳಕೆ
ostrich

ಉಷ್ಣ
(ಭೌ) ಯಾವುದೇ ವ್ಯವಸ್ಥೆಯಲ್ಲಿಯ ಅಸಂಖ್ಯ ಅಣುಗಳ ಚಲನೆಯ ಸಮಗ್ರ ಪರಿಣಾಮವಾಗಿ ಪ್ರಕಟವಾಗುವ ಒಂದು ಶಕ್ತಿರೂಪ. ಉಷ್ಣದ ಮಟ್ಟ (ಎಂದರೆ ಬಿಸಿತನ) ಉಷ್ಣತೆ. (temperature) ಉಷ್ಣತಾ ವ್ಯತ್ಯಾಸವಿರುವ ಎರಡು ವ್ಯವಸ್ಥೆಗಳಲ್ಲಿ ಒಂದರಿಂದ ಇನ್ನೊಂದಕ್ಕೆ ವರ್ಗವಾಗುವ ಶಕ್ತಿಯೇ ಉಷ್ಣ. ಈ ವರ್ಗಾವಣೆ ಅಧಿಕ ಉಷ್ಣತೆಯ ಆಕರದಿಂದ ಕಡಿಮೆ ಉಷ್ಣತೆಯ ಗ್ರಾಹಕದೆಡೆಗೆ ನಡೆಯುತ್ತದೆ. ವಾಸ್ತವವಾಗಿ ಉಷ್ಣ ವರ್ಗಾವಣೆ ಮೂರು ಬಗೆಗಳಲ್ಲಿ ಸಂಭವಿಸುತ್ತದೆ: ವಹನ (conduction), ಸಂವಹನ (convection), ವಿಕಿರಣ (radiation). ಮೊದಲನೆಯದು ಪರಮಾಣುಗಳ ಅಥವಾ ಅಣುಗಳ ನಿಕಟ ಅಂತರಕ್ರಿಯೆಗಳ ಪರಿಣಾಮ: ಲೋಹ ಸರಳಿನ ಒಂದು ಕೊನೆ ಕಾಸಿದಾಗ ಇನ್ನೊಂದು ಕೊನೆ ಕ್ರಮೇಣ ಬಿಸಿ ಆಗುವುದರ ಕಾರಣ ‘ವಹನ’. ಎರಡನೆಯದು ತರಲದ (fluid) ಅಣುಗಳ ಬೆರಕೆಯ ಫಲ: ನೀರು ಕಾಸಿದಾಗ, ಬೆಂಕಿಗೆ ಮೈಯೊಡ್ಡಿ ಕುಳಿತಾಗ ಇತ್ಯಾದಿ, ಬಿಸಿ ತಟ್ಟುವುದರ ಕಾರಣ ‘ಸಂವಹನ’. ಮೂರನೆಯದು, ವಹನ ಸಂವಹನಗಳಿಗಿಂತ ಭಿನ್ನವಾಗಿ, ಮಾಧ್ಯಮದ ಗೈರುಹಾಜರಿಯಲ್ಲಿ, ಉಷ್ಣ ವರ್ಗಾವಣೆ. ಸೌರ ಉಷ್ಣ ನಮಗೆ ತಟ್ಟುವುದು ‘ವಿಕಿರಣ’ದಿಂದ
heat

ಉಷ್ಣ ಆಘಾತ
(ವೈ) ವ್ಯಕ್ತಿಯು ಅತಿ ಉಷ್ಣ ಪರಿಸರ ದಲ್ಲಿದ್ದಾಗ ಅಥವಾ ಆ ಪರಿಸರಕ್ಕೆ ಒಡ್ಡಿಕೊಂಡನಂತರ, ಅವನ ದೇಹದ ಉಷ್ಣ ನಿಯಂತ್ರಣ ವ್ಯವಸ್ಥೆಯ ವೈಫಲ್ಯದ ಕಾರಣ ತಲೆದೋರುವ ವೈಪರೀತ್ಯಗಳು. ದೇಹದ ಉಷ್ಣತೆಯು ೪೦0 ಸೆಲ್ಸಿಯಸ್‌ಗಿಂತ ಹೆಚ್ಚಾದಾಗ, ತಲೆನೋವು ಕಂಡುಬರುತ್ತದೆ. ಹೃದಯಮಿಡಿತ ತೀವ್ರವಾಗಿ, ಉಸಿರಾಟದ ವೇಗ ಹೆಚ್ಚಿ, ರಕ್ತದೊತ್ತಡ ಅಧಿಕವಾಗಿ ಅವಯವಗಳು ಜಡ್ಡುಗಟ್ಟಿ, ಸ್ಪರ್ಶ ಸಂವೇದನೆ ಏರುಪೇರಾಗುತ್ತದೆ. ಮಾನಸಿಕ ಗೊಂದಲದ ನಂತರ, ಸನ್ನಿ ಹಿಡಿದವರಂತೆ ಆಗಿ ಕೋಮಾಕ್ಕೆ ಒಳಗಾಗಬಹುದು. ತುರ್ತು ಚಿಕಿತ್ಸೆಯನ್ನು ನೀಡದಿದ್ದಲ್ಲಿ ಜೀವಾಪಾಯದ ಸಾಧ್ಯತೆಗಳಿರುತ್ತವೆ. ಕಾವು ಹೊಡೆತ, ತಾಪಾಘಾತ, ಶಾಖಾಘಾತ
heatstroke

ಉಷ್ಣ ಒತ್ತಡ
(ಭೌ) ಉಷ್ಣದ ಫಲವಾಗಿ ಪರಮಾಣುಗಳ, ಅಣುಗಳ, ಎಲೆಕ್ಟ್ರಾನ್ ಮುಂತಾದ ಕಣಗಳ ಗೊತ್ತು ಗುರಿಯಿಲ್ಲದ ಚಲನೆಯು ಸೃಷ್ಟಿಸಿದ ಒತ್ತಡ
thermal pressure

ಉಷ್ಣಕಾರಿ
(ತಂ) ತೊಟ್ಟಿಯಲ್ಲಿ ಮುಳುಗಿಸಿರುವ ಸುರುಳಿ ನಾಳದ ಮೂಲಕ ಹಬೆ ಹಾಯಿಸಿ ದ್ರವವನ್ನು ಕಾಸುವ ಉಪಕರಣ. ಕ್ಯಾಲೊರಿಕಾರಿ
calorifier

ಉಷ್ಣಚಿಕಿತ್ಸೆ
(ವೈ) ಶಾಖವನ್ನು ವಿವಿಧ ರೂಪಗಳಲ್ಲಿ ಬಳಸಿ ಚಿಕಿತ್ಸೆ ನೀಡುವಿಕೆ. ಬಿಸಿ ನೀರಿನ ಶಾಖ, ಬಿಸಿ ಉಪ್ಪಿನ ಶಾಖ, ಬಿಸಿ ಅನ್ನದ ಶಾಖ ಇತ್ಯಾದಿಗಳನ್ನು ನೀಡಿ ನೋವನ್ನು ಕಡಿಮೆ ಮಾಡಬಹುದು. ಕಾಯ ಚಿಕಿತ್ಸೆಯಲ್ಲಿ ಪ್ಯಾರಾಫಿನ್ ಮಜ್ಜನದಿಂದ ನೋವನ್ನು ಕಡಿಮೆ ಮಾಡಬಹುದು. ಅವಗೆಂಪು ಕಿರಣಗಳನ್ನು ನಿರ್ದಿಷ್ಟ ಅಂಗಕ್ಕೆ ಒಡ್ಡಿ ನೋವನ್ನು ಶಮನಗೊಳಿಸಬಹುದು. ಇದು ದೇಹಕ್ಕೆ ಸ್ಥಳೀಯವಾಗಿ ನೀಡುವ ಚಿಕಿತ್ಸೆ. ಚಿಕಿತ್ಸೆಯ ಭಾಗವಾಗಿ ಕೃತಕ ವಿಧಾನಗಳಿಂದ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ವ್ಯಕ್ತಿ ಇರುವ ಪರಿಸರದ ಉಷ್ಣತೆಯನ್ನು ಹೆಚ್ಚಿಸುವುದರ ಮೂಲಕ ದೇಹಕ್ಕೆ ಚಿಕಿತ್ಸೆ ನೀಡಬಹುದು. ದೇಹ ಉಷ್ಣತೆ ಹೊರಹರಿಯ ದಂತೆ ಎಚ್ಚರ ವಹಿಸುವುದೂ ಉಷ್ಣಚಿಕಿತ್ಸೆ ವ್ಯಾಪ್ತಿಯಲ್ಲಿ ಬರುತ್ತದೆ
thermotherapy

ಉಷ್ಣಜನನ
(ರ) ಉಚ್ಚ ಉಷ್ಣತೆಯ ಬಳಕೆಯಿಂದ ಆಗುವ ಉಷ್ಣೋತ್ಪಾದನೆ. (ಭೂವಿ) ಶಿಲಾಪಾಕ ಮತ್ತು ಅದರ ನಿಷ್ಪನ್ನಗಳ ಬಹಿಸ್ಸರಣ ಹಾಗೂ ಅಂತಸ್ಸರಣಗಳ ಪರಿಣಾಮ
pyrogenesis


logo