(ಭೌ) ಪರಮಾಣು ರಚನೆಯ ಬೋರ್ ಸಿದ್ಧಾಂತದಲ್ಲಿ ಬಳಸುವ ಒಂದು ಪರಿಕಲ್ಪನೆ. ಒಂದೊಂದು ಎಲೆಕ್ಟ್ರಾನ್ ಚಿಪ್ಪನ್ನೂ ಉಪಚಿಪ್ಪುಗಳಾಗಿ ವಿಭಜಿಸಲಾಗುತ್ತದೆ. ಎಲ್ಲ ಎಲೆಕ್ಟ್ರಾನ್‌ಗಳಿಗೂ ಅದೇ ಕ್ಷಿತಿಜಾಂಶಿಕ ಕ್ವಾಂಟಮ್ ಸಂಖ್ಯೆ ಇರುತ್ತದೆ. ಪರಮಾಣುವಿನಲ್ಲಿ ಶಕ್ತಿಮಟ್ಟದ ಒಂದು ವಿಭಾಗ
subshell
ಉಪಜಾಗೃತ
(ವೈ) ಪೂರ್ಣ ಪ್ರಜ್ಞೆ ಇಲ್ಲದ ಸ್ಥಿತಿ. ವ್ಯಕ್ತಿಯ ಪ್ರಜ್ಞೆಗೆ ಬಾರದೆ ಜರಗುವ ಮಾನಸಿಕ ಕ್ರಿಯೆ. ಉಪಪ್ರಜ್ಞೆ. ಸುಪ್ತಪ್ರಜ್ಞೆ
subconscious
ಉಪಜ್ಞೆ
(ತಂ) ನೈಸರ್ಗಿಕ ಗುಣಧರ್ಮಾನುಸಾರ ಹೊಸ ಸಾಧನ, ಸಲಕರಣೆ, ಉಪಕರಣ ಮುಂತಾದವನ್ನು ನಿರ್ಮಿಸುವುದು. ಉದಾ: ಥಾಮಸ್ ಆಲ್ವ ಎಡಿಸನ್ (೧೮೪೭-೧೯೩೧) ವಿದ್ಯುತ್ ಬಲ್ಬಿನಲ್ಲಿನ ಫಿಲಮೆಂಟನ್ನು ಉಪಜ್ಞಿಸಿದರು. ಆತ ಉಪಜ್ಞೆಕಾರ. ನೋಡಿ: ಅನ್ವೇಷಣೆ, ಆವಿಷ್ಕಾರ, ಸಂಶೋಧನೆ
invention
ಉಪನದಿ
(ಭೂವಿ) ಮುಖ್ಯನದಿಗೆ ನೀರು ಹರಿಸುವ ಯಾವುದೇ ಹೊಳೆ
tributary
ಉಪನಿವೇಶಿಸು
(ತಂ) ಒಂದರಪಕ್ಕದಲ್ಲಿ ಒಂದು ಇರುವಂತೆ ವಸ್ತುಗಳನ್ನು ವ್ಯವಸ್ಥೆಗೊಳಿಸು
juxtapose
ಉಪಪರಮಾಣವಿಕ
(ಭೌ) ಪರಮಾಣುವಿಗಿಂತ ಚಿಕ್ಕದಾದ ಕಣ. ಅಂಥ ಕಣಗಳು ಎಲೆಕ್ಟ್ರಾನ್ ಮತ್ತು ಕ್ವಾರ್ಕ್ ಗಳಂತೆ ಅವಿಭಾಜ್ಯ ಪ್ರಾಥಮಿಕ ಕಣಗಳಾಗಿರಬಹುದು ಅಥವಾ ಪ್ರೋಟಾನ್, ನ್ಯೂಟ್ರಾನ್ ಮತ್ತು ಆಲ್ಫಾ ಕಣಗಳಂತೆ ಸಂಯುಕ್ತ ಗಳಾಗಿರಬಹುದು. (ರ) ಪರಮಾಣು ಮಟ್ಟಕ್ಕಿಂತ ಕೆಳಗಿರುವ ಕಣ ಅಥವಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ. ಉದಾ: ವಿಕಿರಣ ಪಟುತ್ವ, ಎಕ್ಸ್‌ಕಿರಣ, ಬೈಜಿಕ ಕವಚ ಇತ್ಯಾದಿಗಳ ಉತ್ಪಾದನೆಗೆ ಸಂಬಂಧಿಸಿದ
subatomic
ಉಪಪರ್ಣ
(ಪ್ರಾ) ಕೆಲವು ಸ್ತನಿಗಳಲ್ಲಿ ಹೊರಗಿವಿಯ ಗೋಚರ ಭಾಗ, ಹಾಲೆ. ಮೃದ್ವಸ್ಥಿಗಳಿಂದ ರಚಿತವಾದುದು. ಶಬ್ದ ತರಂಗಗಳನ್ನು ಬಾಹ್ಯಶ್ರವಣ ನಾಳ ಮಾರ್ಗದೊಳಕ್ಕೆ ಹರಿಸುವುದು ಇದರ ಕಾರ್ಯ. ಕೆಲವು ಪ್ರಭೇದಗಳಲ್ಲಿ ಈ ಅಂಗಭಾಗವು ಚರವಾಗಿದ್ದು ಶಬ್ದ ಬರುವ ದಿಕ್ಕನ್ನು ಪತ್ತೆಹಚ್ಚಲು ನೆರವಾಗುತ್ತದೆ. ಮೀನು ಮೊದಲಾದವುಗಳ ಈಜುರೆಕ್ಕೆ/ಅದನ್ನು ಹೋಲು ವಂಥದು (ಸ) ಸಂಯುಕ್ತ ಪರ್ಣದ ಪ್ರಥಮ ವಿಭಾಗ
pinna
ಉಪಪ್ರಭೇದ
(ಪ್ರಾ) ವರ್ಗೀಕರಣ ವಿಭಾಗದಲ್ಲಿ ಪ್ರಭೇದದ ಕೆಳಗಿನ ದರ್ಜೆಯದು. ರೂಪಶಾಸ್ತ್ರೀಯ ರೀತ್ಯ ಗುರುತಿಸಬಹುದಾದ್ದು, ಭೌಗೋಲಿಕವಾಗಿ ಪ್ರತ್ಯೇಕವಾದದ್ದು
subspecies
ಉಪಮಾರ್ಗ
(ಸಾ) ಊರೊಳಗಿನ ದಾರಿಗಳನ್ನು ಬಿಟ್ಟು ಊರನ್ನು ಬಳಸಿಕೊಂಡು ಹೋಗಬಹುದಾದ ಬದಲಿ ಹಾದಿ. ಹೊರಳು ದಾರಿ. (ತಂ) ಪ್ರಧಾನ ಕೊಳವಿಯಿಂದ ಅನಿಲ, ಆವಿ ಮೊದಲಾದವುಗಳ ಸರಬರಾಜು ನಿಂತುಹೋದಾಗ ಬಳಸಿಕೊಳ್ಳ ಬಹುದಾದ ಉಪ, ಅಡ್ಡಕೊಳವಿ
bypass
ಉಪರಿ ವಾಯುಮಂಡಲ
(ಖ) ಕ್ಷೋಭ ಗೋಳವನ್ನು ಆವರಿಸಿರುವ ವಾಯುಮಂಡಲ ಭಾಗದ ಸಾಮಾನ್ಯನಾಮ. ಇದರ ಅಧ್ಯಯನಕ್ಕೆ ಬಲೂನ್‌ಗಳ ಬದಲು ರಾಕೆಟ್‌ಗಳನ್ನೇ ನಿಯೋಜಿಸಬೇಕಾಗುತ್ತದೆ