(ಭೌ) ಇದೊಂದು ಚಲಿಸುವ ಸುರಳಿ ಗ್ಯಾಲ್ವನೋಮೀಟರ್. ವಿದ್ಯುತ್ ಪ್ರವಾಹದ ಹಠಾತ್ ಏರಿಕೆಯನ್ನು ಪತ್ತೆಹಚ್ಚುವ ಮೂಲಕ ವಿದ್ಯುತ್ ಆವೇಶವನ್ನು ಅಳೆಯುವುದು ಇದರ ಗುರಿ. ಇದರಲ್ಲಿ ಕನಿಷ್ಠತಮ ಮಂದನ ಕಾರಕತೆಯ ಭಾರವಾದ ಸುರುಳಿ ಇರುತ್ತದೆ. ಇದರ ಮೂಲಕ ವಿದ್ಯುತ್ ಪ್ರವಾಹವನ್ನು ಹಠಾತ್ತನೆ ಹರಿಸಿದಾಗ ಕಾಣಬರುವ ಆರಂಭಿಕ ಪರಮಾವಧಿ ವಿಚಲನೆಯು ಹರಿದುಹೋದ ಒಟ್ಟು ಆವೇಶಕ್ಕೆ ಅನುಪಾತೀಯ. ಇದರಿಂದ ವಿದ್ಯುತ್ ಆವೇಶವನ್ನು ತಿಳಿದು ಅಳೆಯಬಹುದು. ನೋಡಿ: ಗ್ಯಾಲ್ವನೋಮೀಟರ್
ballistic galvanometer
ಉತ್‌ಕ್ಷೇಪಿತ ಬೀಜಕಗಳು
(ಸ) ಸಸ್ಯದಿಂದ ಅತಿ ರಭಸವಾಗಿ ಬೀರಲ್ಪಡುವ ಬೀಜಗಳು. ನೈಸರ್ಗಿಕ ಬೀಜ ಪ್ರಸರಣದ ಒಂದು ಬಗೆ
ballistospores
ಉತ್‌ಕ್ಷೇಪಿತ ಲೋಲಕ
(ತಂ) ಫಿರಂಗಿ ಗುಂಡಿನ ವೇಗ ಅಳೆಯುವ ಸಲಕರಣೆ. ಇದರಲ್ಲಿ ಭಾರವಾದ ಒಂದು ವಸ್ತುವು ಲೋಲಕವಾಗಿ ಇರುತ್ತದೆ. ಈ ಲೋಲಕದ ತೊನೆತಗಳು ಸಮತಲಕ್ಕೆ ಮಾತ್ರ ಸೀಮಿತವಾಗಿರುವಂತೆ ಲೋಲಕ ವನ್ನು ತಂತಿಗಳಿಂದ ತೂಗು ಹಾಕ ಲಾಗಿರುತ್ತದೆ. ಫಿರಂಗಿ ಗುಂಡು ಲೋಲಕವನ್ನು ಬಡಿದೊಡನೆ ಇದು ಸರಿಯುವ ಕೋನವನ್ನು ಓದಿ ಗುಂಡಿನ ವೇಗವನ್ನು ಲೆಕ್ಕ ಹಾಕಲಾಗುವುದು
ballistic pendulum
ಉತ್‌ಪ್ಲವನ
(ಭೂವಿ) ಭೂಗರ್ಭದಿಂದ ಮೇಲಕ್ಕೆ ಚಿಮ್ಮಿ ಬರುವ ದೈತ್ಯಶಕ್ತಿಯ ಕಾರಣವಾಗಿ ಉಂಟಾಗುವ ಸ್ತರಭಂಗಗಳು, ತಿರುಚುಗಳು, ಕಟ್ಟಡಗಳಿಗೆ ಹಾನಿ. ಪ್ರೋತ್ಥಾನ
upheaval
ಉತ್ಕರ್ಷಣ ನಿವಾರಣೆ
(ರ) ಕರಗಿದ ಲೋಹದಿಂದ ಆಕ್ಸಿಜನ್ನನ್ನು ತಗ್ಗಿಸುವುದು ಅಥವಾ ತೆಗೆದು ಹಾಕುವುದು. ಎರಕ ಹೊಯ್ಯುವ ಮುನ್ನ ಇದನ್ನು ಮಾಡಲಾಗುತ್ತದೆ. ಡೀಆಕ್ಸಿಡೀಕರಣ
deoxidation
ಉತ್ಕರ್ಷಣವಿರೋಧಕ
(ರ) ಬಣ್ಣ, ಮೆರುಗೆಣ್ಣೆ, ಪ್ಲಾಸ್ಟಿಕ್, ರಬ್ಬರ್ ಮೊದಲಾದವುಗಳ ಉತ್ಕರ್ಷಣೆಯನ್ನು ನಿಧಾನ ಗೊಳಿಸುವ ಪದಾರ್ಥ. ಕಚ್ಚಾ ವನಸ್ಪತಿ ತೈಲಗಳನ್ನೂ ನೈಸರ್ಗಿಕ ಉತ್ಕರ್ಷಣ ವಿರೋಧಕಗಳನ್ನೂ ಒಳಗೊಂಡಿರುತ್ತದೆ. ಬಣ್ಣಗಳು ಒಣಗುವ ವೇಗವನ್ನು ಅವು ತಗ್ಗಿಸುತ್ತವೆ
antioxidant
ಉತ್ಕರ್ಷಣ ಸಂಖ್ಯೆ
(ರ) ಸಂಯುಕ್ತ ಸ್ಥಿತಿಯಲ್ಲಿರುವ ಒಂದು ಪರಮಾಣುವು ಕಳೆದುಕೊಂಡಿರುವ ಎಲೆಕ್ಟ್ರಾನ್‌ಗಳ ಸಂಖ್ಯೆ ಉದಾ: ಸೋಡಿಯಮ್ ಕ್ಲೋರೈಡ್‌ನಲ್ಲಿ Na+Cl– ಸೋಡಿಯಮ್ ಒಂದು ಎಲೆಕ್ಟ್ರಾನನ್ನು ಕಳೆದುಕೊಂಡಿದೆ. ಆದ್ದರಿಂದ ಅದರ ಉತ್ಕರ್ಷಣ ಸಂಖ್ಯೆ +೧. ಕ್ಲೋರೀನ್ ಒಂದು ಎಲೆಕ್ಟ್ರಾನನ್ನು ಪಡೆದಿದೆ. ಅರ್ಥಾತ್ -೧ ಎಲೆಕ್ಟ್ರಾನನ್ನು ಕಳೆದು ಕೊಂಡಿದೆ. ಆದ್ದರಿಂದ ಕ್ಲೋರೀನ್‌ನ ಉತ್ಕರ್ಷಣ ಸಂಖ್ಯೆ -೧. ಸಂಯುಕ್ತದಲ್ಲಿರುವ ಪರಮಾಣುಗಳ ಉತ್ಕರ್ಷಣ ಸಂಖ್ಯೆಗಳ ಬೈಜಿಕ ಮೊತ್ತ ಯಾವಾಗಲೂ ೦. ಪರಿಶುದ್ಧ ಧಾತುಗಳ ಉತ್ಕರ್ಷಣ ಸಂಖ್ಯೆ ೦. ಉತ್ಕರ್ಷಣ ಸಂಖ್ಯೆಗಳನ್ನು ಆಧರಿಸಿ ಇನಾರ್ಗ್ಯಾನಿಕ್ (ಅಕಾರ್ಬನಿಕ) ಸಂಯುಕ್ತಗಳನ್ನು ಹೆಸರಿಸುವುದು ಈಗ ವಾಡಿಕೆ. ಉದಾ: Fe2O3 ಕಬ್ಬಿಣ (III) ಆಕ್ಸೈಡ್
oxidation number
ಉತ್ಕರ್ಷಣೆ
(ರ) ಯಾವುದೇ ವಸ್ತುವಿನೊಂದಿಗೆ ಆಕ್ಸಿಜನ್ನಿನ ಸಂಯೋಜನೆ ಅಥವಾ ಆ ವಸ್ತುವಿನಿಂದ ಹೈಡ್ರೊಜನ್ನಿನ ವಿಯೋಜನೆ. ಆಕ್ಸಿಡೀಕರಣ. ಸಾಮಾನ್ಯವಾಗಿ ರಾಸಾಯನಿಕ ಕ್ರಿಯೆಯಲ್ಲಿ ಪರಮಾಣುವೊಂದು ಎಲೆಕ್ಟ್ರಾನ್‌ಗಳನ್ನು ಕಳೆದುಕೊಳ್ಳು ವುದನ್ನು ಉತ್ಕರ್ಷಣೆ ಎನ್ನಲಾಗುತ್ತದೆ. ಉದಾ: ಫೆರಸ್ ಅಯಾನ್ Fe++ ಫೆರಿಕ್ ಅಯಾನ್ Fe+++ ಆಗಿ ಬದಲಾಗುವುದು. ಉತ್ಕರ್ಷಣೆ ಯಾವತ್ತೂ ಅಪಕರ್ಷಣೆಯೊಂದಿಗೇ ಜರಗುತ್ತದೆ. ಉದಾ : 4Na(s)+O2(g) ® 2Na2O(s). ಇಲ್ಲಿ ಸೋಡಿಯಮ್ ಪರಮಾಣುಗಳು ಎಲೆಕ್ಟ್ರಾನ್‌ಗಳನ್ನು ಕಳೆದುಕೊಂಡು Na+ ಅಯಾನ್ ಗಳಾಗಿ ಉತ್ಕರ್ಷಣೆಗೊಂಡಿವೆ. ಅದೇ ಹೊತ್ತಿನಲ್ಲಿ ಆಕ್ಸಿಜನ್ ಪರಮಾಣುಗಳು ಎಲೆಕ್ಟ್ರಾನ್‌ಗಳನ್ನು ಗಳಿಸಿಕೊಂಡು ಅಪಕರ್ಷಣೆ ಗೊಂಡಿವೆ. ಆಕ್ಸಿಜನ್ ಪಾತ್ರವಿಲ್ಲದೆಯೂ ಉತ್ಕರ್ಷಣೆ ಅಪಕರ್ಷಣೆ ಗಳು ಜರಗಬಹುದು. ಉದಾ : 2Na(s)+Cl2(g) 22NaCl(s) ಇಲ್ಲಿ ಸೋಡಿಯಮ್ ಉತ್ಕರ್ಷಣೆಗೊಂಡಿದೆ, ಕ್ಲೋರಿನ್ ಅಪಕರ್ಷಣೆಗೊಂಡಿದೆ
oxidation
ಉತ್ಕೇಂದ್ರತೆ
(ಗ) ಜ್ಯಾಮಿತೀಯ ಕೇಂದ್ರದಿಂದ ಬಲ ವರ್ತಿಸುವ ಕೇಂದ್ರದ ವಿಚಲನೆಯ ಅಳತೆ. ದೀರ್ಘ ವೃತ್ತದಲ್ಲಿ ಬಲ ಕೇಂದ್ರ ನಾಭಿ (S) ಮತ್ತು ಜ್ಯಾಮಿತೀಯ ಕೇಂದ್ರ C ಆಗಿದ್ದರೆ CS ದೀರ್ಘವೃತ್ತದ ಉತ್ಕೇಂದ್ರತೆಗೆ ಅನುಪಾತೀಯವಾಗಿರುತ್ತದೆ