(ಭೌ) ವಿದ್ಯುಲ್ಲೇಪನ ಪ್ರಕ್ರಿಯೆಯಲ್ಲಿ ಲೇಪಿತ ತಲ ಉಜ್ಜ್ವಲವಾಗಿ ಹೊಳೆಯುವಂತೆ ಮಾಡುವ ಸಂಸ್ಕರಣ. ಇಂಥ ಮೇಲ್ಮೈಗಳಿಗೆ ಒಪ್ಪ ನೀಡುವ ಆವಶ್ಯಕತೆ ಇರುವುದಿಲ್ಲ
bright electroplating
ಉಜ್ಜ್ವಲ ಹಸಿರು
(ರ) ಟೆಟ್ರ-ಈಥೈಲ್-ಡೈ- ಅಮಿನೊ-ಟ್ರೈ ಫೀನೈಲ್-ಮೀಥನಾಲ್ ಅನ್‌ಹೈಡ್ರೈಡ್‌ನ ಸಲ್ಫೇಟ್. ಸೋಂಕು ನಿವಾರಕ ಹಸಿರು ವರ್ಣದ್ರವ್ಯ
brilliant green
ಉಜ್ಜ್ವಲತಾಕಾರಕ
(ತಂ) ವಸ್ತ್ರ, ಕಾಗದ ಮುಂತಾದವುಗಳ ಬಿಳಿ ಅಥವಾ ಬಣ್ಣದ ಮೈ ಎದ್ದುಕಾಣುವಂತೆ ಮಾಡಲು ಬಳಸುವ ರಾಸಾಯನಿಕ. ಇದು ಅತಿನೇರಿಳೆ ವಿಕಿರಣದ ಸ್ವಲ್ಪ ಭಾಗವನ್ನು ಗೋಚರ ಬೆಳಕಾಗಿ ಪರಿವರ್ತಿಸುವ ಮೂಲಕ ವಸ್ತುವಿನ ಮೈಗೆ ಈ ಉಜ್ಜ್ವಲತೆಯನ್ನು ಒದಗಿಸುತ್ತದೆ
brightening agent
ಉಡ
(ಪ್ರಾ) ಲ್ಯಾಸರ್ ಟೀಲಿಯ ಉಪಗಣ ಹಾಗೂ ವೆರಾನಿಡೀ ಕುಟುಂಬದ, ಹಲ್ಲಿಯನ್ನು ಹೋಲುವ ಶಲ್ಕವಂತ ಸರೀಸೃಪ. ವರಾನಸ್ ಜಾತಿಗೆ ಸೇರಿದೆ. ಸೀಳು ನಾಲಿಗೆ, ಉದ್ದ ಹಾಗೂ ಬಾಗಬಲ್ಲ ಕತ್ತು ಇವೆ. ಉಗುರಿನಿಂದ ಗೋಡೆಯನ್ನು ಬಲ ವಾಗಿ ಕಚ್ಚಿಕೊಳ್ಳಬಲ್ಲದು. ಈ ವಿಶೇಷ ಲಕ್ಷಣದಿಂದಾಗಿ ಹಿಂದಿನ ಕಾಲದಲ್ಲಿ ಕೋಟೆಗಳಿಗೆ ಲಗ್ಗೆ ಹಾಕಿ ಮೇಲಕ್ಕೆ ಹತ್ತಲು ಉಡಗಳನ್ನು ಹೇರಳವಾಗಿ ಉಪಯೋಗಿಸುತ್ತಿದ್ದರು. ಹಿಂದೆ ಇದರ ಕೊಬ್ಬಿನಿಂದ ಉಡದ ತುಪ್ಪ ಎಂಬ ಔಷಧಿಯನ್ನು ತಯಾರಿಸಿ ವಾತರೋಗಗಳಿಗೆ ಉಪ ಯೋಗಿಸುತ್ತಿದ್ದರು. ಈಗ ನಿಷಿದ್ಧ. ಗೌಳಿ
monitor
ಉಡಾವಣಾ ವಾಹನ
(ಆವಿ) ಕೃತಕ ಭೂ-ಉಪಗ್ರಹಗಳನ್ನೂ ಹಾಗೂ ಸ್ವಯಂಚಾಲಿತ ಇಲ್ಲವೇ ಗಗನಯಾತ್ರಿಗಳಿರುವ ನೌಕೆಗಳನ್ನೂ ಭೂ ಕಕ್ಷೆಗೆ ಕೊಂಡೊಯ್ಯುವ ರಾಕೆಟ್ ವಾಹನ. ಉದಾ: ಎಎಸ್‌ಎಲ್‌ವಿ, ಜಿಎಸ್‌ಎಲ್‌ವಿ
launch vehicle
ಉಣ್ಣಿ
(ಪ್ರಾ) ಇದು ಆರ್ತ್ರಾಪೊಡ ವಿಭಾಗ, ಆರ‍್ಯಾಕ್ನಿಡ ಉಪವಿಭಾಗ, ಆಕರೈನ ಗಣದ ಇಕ್ಸೋಡಿಡೀ ಮತ್ತು ಆರ್ಗ್ಯಾಸಿಡೀ ಕುಟುಂಬಗಳಿಗೆ ಸೇರಿದ ಅನೇಕ ಬಗೆಯ ರಕ್ತ ಹೀರುವ ಪರೋಪ ಜೀವಿಗಳ ಸಾಮಾನ್ಯ ನಾಮ. ದನಕರು, ಎಮ್ಮೆ, ಕುರಿ, ನಾಯಿ ಮುಂತಾದ ಸಾಕು ಪ್ರಾಣಿಗಳ ಹೊರಚರ್ಮ ವನ್ನು ಕಚ್ಚಿಕೊಂಡಿದ್ದು ಅವುಗಳ ರಕ್ತ ಹೀರಿ ಬದುಕುತ್ತದೆ. ರೋಗ ಹರಡಲು ಕಾರಣ. ಚಿಗಟ
tick
ಉಣ್ಣೆ
(ಪ್ರಾ) ನಿರ್ದಿಷ್ಟವಾಗಿ, ಕುರಿಯ ಮೈಮೇಲೆ ಒಂದರ ಮೇಲೊಂದು ಒರಗಿದಂತೆ ಹರಡಿರುವ ಕೂದಲಿನ ಒಂದು ಬಗೆ. ಇದರ ಎಳೆಗಳು ಗಿಡ್ಡವಾಗಿದ್ದು ಸುರುಳಿಯ ಸುತ್ತಿಕೊಂಡಿರುವುವು. ಕೆರಾಟಿನ್‌ನಿಂದ ಸಂಯೋಜಿತವಾಗಿದೆ. ತುಪ್ಪಟ, ತುಪ್ಪುಳ
wool
ಉತ್‌ಕ್ಷೇಪ ವಿಜ್ಞಾನ
(ತಂ) ಗುರುತ್ವಾಕರ್ಷಣ ಕ್ಷೇತ್ರದಲ್ಲಿ ಮುಕ್ತವಾಗಿ ಚಲಿಸುತ್ತಿರುವ ವಸ್ತುವೊಂದರ ಗತಿ, ಪಥ ಮತ್ತು ಪರಿಣಾಮ ಕುರಿತ ಬಲ ವೈಜ್ಞಾನಿಕ ಅಧ್ಯಯನ
ballistics
ಉತ್‌ಕ್ಷೇಪಿತ ಕ್ಷಿಪಣಿ
(ಭೌ) ಮಿಲಿಟರಿ ಕ್ಷಿಪಣಿ. ಇದರ ಯಾನವು ಉತ್‌ಕ್ಷೇಪಿತ ಆವೇಗವನ್ನೂ ಯಾನ ಕಾಲದಲ್ಲಿ ಅದರ ಮೇಲೆ ವರ್ತಿಸುತ್ತಿರುವ ಗುರುತ್ವ ಬಲವನ್ನೂ ಭಾಗಶಃ ಇಲ್ಲವೇ ಪೂರ್ಣವಾಗಿ ಅವಲಂಬಿಸಿ ಇರುತ್ತದೆ. ಪ್ರಾರಂಭದಲ್ಲಿ ಇಂಧನ ತುಂಬಿ ಗುರಿ ತಲಪಲು ಮಾರ್ಗದರ್ಶನ ನೀಡಿ ಹಾರಿಸಿದ ಕ್ಷಿಪಣಿ. ಹಾರಿಸಿದ ನಂತರ ಗುರುತ್ವಾಕರ್ಷಣ ಬಲದಿಂದಲೇ ಚಲಿಸುತ್ತದಾದ್ದರಿಂದ ಇದರ ಮಾರ್ಗವನ್ನು ಅದನ್ನು ಹಾರಿ ಬಿಟ್ಟ ನೆಲೆಯಿಂದ ಬದಲಿಸ ಲಾಗದು. ಈ ದೃಷ್ಟಿಯಿಂದ ಇದು ನಿರ್ದೇಶಿತ ಕ್ಷಿಪಣಿ ಯಿಂದ ಭಿನ್ನ. ನಿರ್ದೇಶಿತ ಕ್ಷಿಪಣಿ ಹಾರಾಟ ಮಾರ್ಗವನ್ನು ಹಾರಾಟ ನೆಲೆಯಿಂದ ಯಾವಾಗ ಬೇಕಾದರೂ ಬದಲಿಸಬಹುದು. ನೋಡಿ: ಕ್ಷಿಪಣಿ