(ತಂ) ಆವರ್ತಿಸುತ್ತಿರುವ ಅಥವಾ ಕಂಪಿಸುತ್ತಿರುವ ಕಾಯಗಳನ್ನು ಅವು ನಿಶ್ಚಲ ಸ್ಥಿತಿಯಲ್ಲಿ ಇರುವಾಗಿನಷ್ಟೇ ವಿವರವಾಗಿ ವೀಕ್ಷಿಸಲು ಹಾಗೂ ಕಂಪನ ವೇಗವನ್ನು ಅಳೆಯಲು ಅನುಕೂಲಿಸುವಂತೆ ನಿಯತಕಾಲಿಕವಾಗಿ ಬಿಟ್ಟುಬಿಟ್ಟು (ಪೀರಿಯಾಡಿಕ್, ಇಂಟರ್ ಮಿಟೆಂಟ್) ಬೆಳಕು ಬೀರುವ ಉಪಕರಣ. ಭ್ರಮಣದರ್ಶಕ
stroboscope
ಆವರ್ತನಮಾಪಕ
(ತಂ) ಆವರ್ತಿಸುತ್ತಿರುವ ದಂಡದ ಕೋನೀಯ ವೇಗ ವನ್ನು ಅಥವಾ ಅದು ಒಂದು ಮಿನಿಟ್‌ನಲ್ಲಿ ಪೂರೈಸುವ ಆವರ್ತನೆ ಗಳ ಸಂಖ್ಯೆಯನ್ನು ಅಳೆಯುವ ಉಪ ಕರಣ. ಆ ಮೂಲಕ ವಾಹನದ ವೇಗವನ್ನು ಅಥವಾ ಗತಿಯನ್ನು ಅಳೆಯಬಹುದು
tachometer
ಆವರ್ತನಾವಧಿ
(ಖ) ವೀಕ್ಷಣೆಗಳಿಂದ ಕಂಡುಬಂದಂತೆ ಯಾವುದೇ ಗ್ರಹ/ಉಪಗ್ರಹ ತನ್ನ ಅಕ್ಷದ ಮೇಲೆ ಒಂದು ಪೂರ್ಣ ಆವರ್ತನೆಗೆ ತೆಗೆದುಕೊಳ್ಳುವ ಕಾಲದ ಮಾಧ್ಯ ಮೌಲ್ಯ. ಭ್ರಮಣಾವಧಿ
period of rotation
ಆವರ್ತ ನಿಯಮ
(ರ) ಧಾತುಗಳ ಗುಣಗಳು ಅವುಗಳ ಪರಮಾಣು ತೂಕಗಳ ಮೇಲೆ ಅವಧಿಯುತವಾಗಿ ಅವಲಂಬಿಸಿವೆ ಎನ್ನುವ ನಿಯಮ. ಇದನ್ನು ಮೊದಲಬಾರಿಗೆ ೧೮೬೯ರಲ್ಲಿ ಮೆಂದೆಲ್ಯೇವ್ ಪ್ರತಿಪಾದಿಸಿದ. ಧಾತುಗಳನ್ನು ಆವರ್ತಕೋಷ್ಟಕದಲ್ಲಿ ವ್ಯವಸ್ಥೆಗೊಳಿಸಿದಾಗ ಈ ನಿಯಮದ ಅನ್ವಯ ಖಚಿತಗೊಂಡಿತು
periodic law
ಆವರ್ತನೆ
(ಖ) ವಸ್ತು ತನ್ನ ಸುತ್ತ ತಾನೇ ತಿರುಗುವುದು. ಉದಾ: ಬುಗುರಿಯ ಗಿರಕಿ, ಆವರ್ತನೆಯ ಕಾರಣವಾಗಿ ವಸ್ತುವಿನಲ್ಲಿ ಒಂದು ಅಕ್ಷ ನಿರ್ಣೀತವಾಗುವುದು. ಭೂಮಿಯ ಆವರ್ತನೆಯ ಪರಿಣಾಮವೇ ಹಗಲು ಇರುಳುಗಳು. ಉತ್ತರ ಮತ್ತು ದಕ್ಷಿಣ ಧ್ರುವಗಳ ಜೋಡಣೆಯೇ ಭೂಮಿಯ ಅಕ್ಷ
rotation
ಆವರ್ತ ಫಲನ
(ಗ) ನಿರ್ದಿಷ್ಟ ಅವಧಿ ಇರುವ, ಈ ಅವಧಿ ಮುಗಿಯುವಾಗ ಪುನರಾವರ್ತಿಸುವ, ಫಲನ. T ಅವಧಿಯಾಗಿದ್ದು xನ ಪ್ರತಿಯೊಂದು ಮೌಲ್ಯಕ್ಕೂ f (x+T) = f (x) ಆಗಿದ್ದರೆ f (x) ಒಂದು ಆವರ್ತ ಫಲನ
periodic function
ಆವಾಸ
(ಜೀ) ಯಾವುದೇ ಸಸ್ಯ ಅಥವಾ ಪ್ರಾಣಿ ಪರಿಸರದ ಅಂಶಗಳಿಗೆ ಹೊಂದಿಕೊಂಡು ಸಹಜವಾಗಿ ಹುಟ್ಟಿ ಬೆಳೆಯುವ ಸ್ಥಳ. ವಸತಿ, ನೆಲೆ, ತವರು
habitat
ಆವಿಗೆ
(ತಂ) ಅದಿರುಗಳನ್ನು ಶುಷ್ಕಗೊಳಿಸಲು ಸುಣ್ಣಕಲ್ಲಿನಿಂದ ಕಾರ್ಬನ್ ಡೈಆಕ್ಸೈಡನ್ನು ಹೊರಹಾಕಲು, ಡೈಆಕ್ಸೈಡ್ ಆಗಿ ಗಂಧಕ ವನ್ನು ನಿವಾರಿಸಲೋಸುಗ ಸಲ್ಫೈಡ್ ಅದಿರುಗಳನ್ನು ಅಥವಾ ಸಾಂದ್ರಣಗಳನ್ನು ಸುಡಲು, ಅಪಕರ್ಷಕ ವಾತಾವರಣದಲ್ಲಿ ಕಬ್ಬಿಣದ ಅದಿರುಗಳನ್ನು ಕಾಂತಸ್ಥಿತಿಗೆ ಅಪಕರ್ಷಿಸಲು ಉಪಯೋಗಿಸುವ ಒಲೆ
kiln
ಆವಿಗೆ
(ತಂ) ರೊಟ್ಟಿಯನ್ನು ಅಥವಾ ಇತರ ಆಹಾರ ಪದಾರ್ಥ ಗಳನ್ನು ಸುಡುಗಾಳಿಯಿಂದ ಬೇಯಿಸುವ ಇಟ್ಟಿಗೆಯ, ಕಲ್ಲಿನ ಅಥವಾ ಕಬ್ಬಿಣದ (ಗೂಡು) ಒಲೆ
oven
ಆವಿಶೀಲ ಲವಣ
(ರ) ಮಾರುಕಟ್ಟೆಯ ಅಮೋನಿಯಮ್ ಕಾರ್ಬೊನೇಟ್. ವಾಸ್ತವವಾಗಿ ಇದು ಅಮೋನಿಯಮ್ ಬೈ ಕಾರ್ಬೊನೇಟ್ NH4HCO3. ಅಮೋನಿಯಮ್ ಕಾರ್ಬಮೈಟ್ NH4O.CO.NH2 ಮತ್ತು ಅಮೋನಿಯಮ್ ಕಾರ್ಬೊನೇಟ್ (NH4)2CO3ಗಳ ಮಿಶ್ರಣ. ಪ್ರಜ್ಞೆ ತಪ್ಪಿಸುವಾಗ ಮೂಸಿಸುವ ಸುವಾಸಿತ ಲವಣ