logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆರ್ತೊಪಿಡಿಕ್ಸ್
(ವೈ) ನಮ್ಮ ದೇಹದ ಅವಯವ, ಬೆನ್ನುಮೂಳೆ ಹಾಗೂ ಸಂಬಂಧಿತ ರಚನೆಗಳ ರೂಪ ಹಾಗೂ ಕಾರ್ಯಗಳನ್ನು ಭೌತಿಕ, ವೈದ್ಯಕೀಯ ಹಾಗೂ ಶಸ್ತ್ರವೈದ್ಯ ವಿಧಾನಗಳ ಮೂಲಕ ವರ್ಧಿಸಿ ಕಾಪಾಡಿ ಹಾಗೂ ಪುನಶ್ಚೇತನ ಗೊಳಿಸುವ ವಿಜ್ಞಾನ ವಿಭಾಗ. ಮೂಳೆ ಮತ್ತು ಕೀಲುಗಳ ವೈದ್ಯ ವಿಭಾಗ. ಅಸ್ಥಿಸುರೂಪಿಕಾಶಾಸ್ತ್ರ
orthopaedics

ಆರ್ತೊಸಿಂಪತೆಟಿಕ್ ನರ್ವಸ್ ಸಿಸ್ಟಮ್
(ಪ್ರಾ) ಉಪಾನುವೇದಕ (ಪ್ಯಾರಾ ಸಿಂಪತೆಟಿಕ್) ನರಮಂಡಲಕ್ಕೆ ವಿರುದ್ಧವಾಗಿ ಅನುವೇದಕ ನರಮಂಡಲವನ್ನು ಸೂಚಿಸಲು ಕೆಲವು ವೇಳೆ ಬಳಸುವ ಪದಪುಂಜ
orthosympathetic nervous system

ಆರ್ತೊಸ್ಕೋಪ್
(ವೈ) ೧. ನೀರಿನ ಸ್ತರವೊಂದನ್ನು ಒಳಗೊಂಡಿದ್ದು ಅದರ ಮೂಲಕ ಕಣ್ಣನ್ನು ಪರೀಕ್ಷಿಸಲು ಬಳಸುವ ಸಾಧನ. ನೀರಿನ ಸ್ತರ ಕಣ್ಣು ಗುಡ್ಡೆಯ ವಕ್ರತೆಯನ್ನು, ಅದರಿಂದಾಗಿ ವಕ್ರೀಕರಣವನ್ನು ತಟಸ್ಥೀಕರಿಸುತ್ತದೆ. ೨. ಕಪಾಲಗಳ ಪ್ರಕ್ಷೇಪಣ ಗಳನ್ನು ರೇಖಿಸಲು ಬಳಸುವ ಸಾಧನ. (ತಂ) ಸೂಕ್ಷ್ಮದರ್ಶಕದ ಅಕ್ಷಕ್ಕೆ ಸಮಾಂತರವಾಗಿರುವ ಸ್ಫಟಿಕದ ಮೂಲಕ ಬೆಳಕನ್ನು ಸಾಗಿಸುವ ಧ್ರುವೀಕಾರಕ ಸೂಕ್ಷ್ಮದರ್ಶಕ
orthoscope

ಆರ್ಥಿಕ ಬೆಳೆ
(ಸ) ಕೇವಲ ಅಥವಾ ಮುಖ್ಯವಾಗಿ ಮಾರಾಟದ, ಲಾಭ ಗಳಿಸುವ ಅಥವಾ ಯಶಸ್ವಿಯಾಗುವ ದೃಷ್ಟಿಯಿಂದ ಬೃಹತ್ ಪ್ರಮಾಣದಲ್ಲಿ ಬೆಳೆಸಿದ ಬೆಳೆ. ಉದಾ: ಕಬ್ಬು, ನೆಲಗಡಲೆ, ಹತ್ತಿ ಇತ್ಯಾದಿ. ವಾಣಿಜ್ಯ ಬೆಳೆ
commercial crop

ಆರ್ಥೊಟ್ರೋಪಿಸಮ್
(ಸ) ಸಸ್ಯಗಳ ಕಾಂಡ ಅಥವಾ ಬೇರುಗಳಲ್ಲಿ ಕಂಡುಬರುವಂತೆ, ನೇರವಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಬೆಳೆಯುವ ಪ್ರವೃತ್ತಿ
orthotropism

ಆರ್ಥೊಫಾಸ್ಫಾರಿಕ್ ಆಮ್ಲ
(ರ) H3PO4. ರಂಜಕದ (ಫಾಸ್ಫರಸ್) ತ್ರಿಪ್ರತ್ಯಾಮ್ಲೀಯ ಆಮ್ಲ. ಬಣ್ಣವಿಲ್ಲದ ಜಲಾಕರ್ಷಕ ಪದಾರ್ಥ. ದ್ರಬಿಂ ೪೨.೫0 ಸೆ. ರಂಜಕಯುಕ್ತ ಗೊಬ್ಬರವಾಗಿ, ಪಾನೀಯಗಳಲ್ಲಿ ರುಚಿಕಾರಕವಾಗಿ ಬಳಕೆ
orthophosphoric acid

ಆರ್ದ್ರ
(ಭೌ) ವಾಯುವಿನಲ್ಲಿ ನೀರಿನ ಅಂಶ ಪರ್ಯಾಪ್ತ ಸ್ಥಿತಿ ತಲಪಿದಾಗಿನ ವಾಯುಗುಣ. ಸಿಕ್ತ. ತೇವಮಯ. ಒದ್ದೆ
wet

ಆರ್ದ್ರತಾಕಾರಕ
(ರ) ಯಾವುದೇ ದ್ರವದ ಮೇಲ್ಮೈಕರ್ಷಣವನ್ನು ಇಳಿಸುವ ಪದಾರ್ಥ. ಮೇಲ್ಮೈಯು ತೇವಕಾರಕ ವಸ್ತುವನ್ನು ವಿಕರ್ಷಿಸದಂತೆ ಮಾಡುವ ಪದಾರ್ಥ
wetting agent

ಆರ್ದ್ರ ಹವೆ
(ಭೂವಿ) ಮಳೆಯ ಹವೆ
wet weather

ಆರ್ದ್ರತಾದರ್ಶಕ
(ಭೌ) ವಾಯುವಿನ ತೇವಾಂಶವನ್ನು ಅಳೆಯದೆ ಅದರಲ್ಲಿ ಆಗುವ ವ್ಯತ್ಯಯ ತೋರಿಸುವ ಉಪಕರಣ
hygroscope


logo