(ಸಂ) ಸನ್ನಿವೇಶಗಳನ್ನು ಹೋಲಿಸಲು ಸೂಚ್ಯಂಕವನ್ನು ರಚಿಸುವಾಗ ಹೋಲಿಕೆಗೆ ಆಧಾರವಾಗಿ ಬಳಸುವ ಅವಧಿ. ಉದಾ: ವರ್ಷ ೨೦೦೪ರ ಜೀವನವೆಚ್ಚದ ಅಧ್ಯಯನಕ್ಕೆ ವರ್ಷ ೨೦೦೦ವನ್ನು ಆಧಾರವಾಗಿ ಆಯುವುದು. ಆಗ ಸೂಚ್ಯಂಕ ಆಧಾರ ವರ್ಷಕ್ಕೆ ಸಾಪೇಕ್ಷವಾಗಿ ಪರಿಸ್ಥಿತಿಯನ್ನು ತಿಳಿಸುತ್ತದೆ
base period
ಆಧಾರ ಉಪಾಪಚಯ ದರ
(ವೈ) ಒಬ್ಬ ವ್ಯಕ್ತಿ ಎಚ್ಚರವಾಗಿರುವಾಗ, ಅವನ ದೇಹದ ಜೀವಕೋಶಗಳೆಲ್ಲ ಅತ್ಯಂತ ಕಡಿಮೆ ಉಷ್ಣತೆಯಲ್ಲಿ ಕೆಲಸ ಮಾಡುವಾಗ ಉತ್ಪಾದನೆ ಯಾಗುವ ಶಕ್ತಿಯ ಪ್ರಮಾಣ. ಒಬ್ಬ ವ್ಯಕ್ತಿಯ ದೇಹದಲ್ಲಿ ಉಸಿರಾಟ, ರಕ್ತ ಪರಿಚಲನೆ, ಸ್ರಾವ ಇತ್ಯಾದಿಗಳು ನಡೆಯಲು ಜೀವಕೋಶ ಗಳಿಗೆ ಬೇಕಾಗುವ ಕನಿಷ್ಠ ಶಕ್ತಿ. ಇದನ್ನು ಕಂಡುಹಿಡಿಯುವ ವಿಧಾನ ಹೀಗಿದೆ: ಒಬ್ಬ ವ್ಯಕ್ತಿ ಬೆಳಗಿನ ಜಾವ ಬರಿ ಹೊಟ್ಟೆಯಲ್ಲಿ ಮಲಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪೂರ್ಣ ವಿಶ್ರಾಂತಿಯನ್ನು ಪಡೆಯುತ್ತಿರಬೇಕು. ಕೋಣೆಯ ಉಷ್ಣತೆಯು ೨೦0 ಸೆಲ್ಸಿಯಸ್ ಇರಬೇಕು. ಈ ಉಷ್ಣತೆಯಲ್ಲಿ ಜೀವಧಾರಣೆಗೆ ಎಷ್ಟು ಶಕ್ತಿ ಬೇಕಾಗುವುದೋ ಆ ಶಕ್ತಿಯೇ ಆಧಾರ ಉಪಾಪಚಯ ಪ್ರಮಾಣ. ಇದನ್ನು ದೇಹದ ಮೇಲ್ಮೈ ವಿಸ್ತೀರ್ಣದ ಚದರ ಮೀಟರ್‌ಗಳಿಗೆ ಇಂತಿಷ್ಟು ಮಿಲಿವಾಟ್‌ಗಳೆಂದು ಅಳೆಯಲಾಗುವುದು
basal metabolic rate
ಆಧಾರ ಏಕಮಾನ
(ಸಾ) ಮಾನಗಳ ಅಂತರರಾಷ್ಟ್ರೀಯ ವ್ಯವಸ್ಥೆಯ (si) ಏಕಮಾನ. ಇದು ೭ ಆಧಾರ ಏಕಮಾನಗಳ ತಳಹದಿ ಮೇಲೆ ಸಂಗತವಾಗಿ ರಚಿತವಾಗಿದೆ: ಮೀಟರ್ (ಉದ್ದ) ಕಿಲೋಗ್ರಾಮ್ (ರಾಶಿ), ಸೆಕೆಂಡ್ (ಕಾಲ) ಆಂಪೇರ್ (ವಿದ್ಯುನ್ಮಾನ), ಕೆಲ್ವಿನ್ (ಉಷ್ಣತೆ), ಕ್ಯಾಂಡೆಲ (ದೀಪ್ತಿತೀವ್ರತೆ) ಮತ್ತು ಮೋಲ್ (ಪದಾರ್ಥ ಪ್ರಮಾಣ)
base unit
ಆಧಾರಕಟ್ಟು
(ಪ್ರಾ) ಮುಂದೆ ತನ್ನ ಮೇಲೆ ಬೆಳೆಯಲಿರುವ ಭಾಗಗಳ ರೂಪರೇಖೆ ಸೂಚಿಸುವ ಪ್ರಾಣಿ ಅಂಗದ ಮೂಲ ಕಟ್ಟು
scaffold
ಆಧಾರ ಕಲ್ಪನೆ
(ಗ) ವೈಜ್ಞಾನಿಕ ವಿಧಾನದಲ್ಲಿ ಪ್ರಮುಖ ಹಂತ. ವಿಶ್ಲೇಷಿತ ಮಾಹಿತಿಗಳನ್ನು ಬೆಸೆದು ದತ್ತ ಸಮಸ್ಯೆ ಕುರಿತ ಪರಿಹಾರ ಇದಾಗಿರಬಹುದೇ ಎಂದು ಮಂಡಿಸುವ ವಾದ. ಇದರ ರೂಪಣೆಯಲ್ಲಿ ಅಂತರ್ಬೋಧೆ ಅಥವಾ ಅಂತಃಪ್ರಜ್ಞೆಯ (intuition) ಪಾತ್ರ ಪ್ರಮುಖ. ಆಧಾರಭಾವನೆ. ಊಹೆ
hypothesis
ಆಧಾರ ಕಾಯ
(ಜೀ) ರೋಮಕಗಳ (ಕಣ್ಣೆವೆ) ತಳದಲ್ಲಿರುವ ಸಿಲಿಂಡರಿನಂಥ ರಚನೆ. ಇದು ತ್ರಿವಳಿ ಮೈಕ್ರೊ ಟ್ಯೂಬ್ಯೂಲುಗಳ ಒಂಬತ್ತು ಗುಂಪುಗಳಿಂದಾಗಿದೆ. ಕೃಷಿಕೆಯಲ್ಲಿ ಮೈಕ್ರೊ ಟ್ಯೂಬ್ಯೂಲುಗಳ ಬೆಳವಣಿಗೆಯ ಕೇಂದ್ರವಾಗಿ ಉಪಯೋಗಕ್ಕೆ ಬರುತ್ತದೆ
basal body
ಆಧಾರ ದತ್ತಾಂಶ
(ಕಂ) ಆಟೊಮೇಟೆಡ್ ಫೈಲ್‌ಗಳು, ಲೈಬ್ರರಿ/ಕಂಪ್ಯೂಟರ್ ಡಿಸ್ಕ್‌ಗಳ ಯಾವುದೇ ಸಮೂಹದಲ್ಲಿ ಸಂಗ್ರಹಿಸಿದ ಮಾಹಿತಿಗಳ ಸಂಪೂರ್ಣ ಸಮುಚ್ಚಯ. ದತ್ತಾಧಾರ
data base
ಆಧಾರ ನರಗ್ರಂಥಿಗಳು
(ವೈ) ಪ್ರಧಾನ ಮಿದುಳ ತೊಗಟೆಯ ಕೆಳಭಾಗದಲ್ಲಿ ಕಂಡುಬರುವ, ವ್ಯಕ್ತಿಯ ಚಲನ ವಲನಗಳನ್ನು ನಿಯಂತ್ರಿಸುವ ನರಕೇಂದ್ರಗಳ ಸಮೂಹದ ಹೆಸರು. ಕಾರ್ಡೇಟ್, ಲೆಂಟಿಫಾರ್ಮ್, ಸಬ್‌ಸ್ಟಾನ್ಶಿಯ ನೈಗ್ರ ಇತ್ಯಾದಿ ನರಕೇಂದ್ರಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಇವುಗಳಿಗೆ ತಾಗುವ ರೋಗದ ಫಲವೇ ಪಾರ್ಕಿನ್ಸೋನಿಸಂ ಮತ್ತು ಕಂಪವಾತ. (ಪ್ರಾ) ಕಶೇರುಕಗಳಲ್ಲಿ ಪ್ರಮಸ್ತಿಷ್ಕವನ್ನು ಇತರ ನರಕೇಂದ್ರ ಗಳೊಂದಿಗೆ ಸಂಬಂಧಿಸುವ ನರಗ್ರಂಥಿಗಳು
basal ganglia
ಆಧಾರ ಪಟ್ಟಿ
(ವೈ) ೧. ಮನೆಯ ಚಾವಣಿಗೆ ತೊಲೆ ಹೇಗೆ ಆಧಾರವೋ ಹಾಗೆ ಶರೀರದ ಒಂದು ಅಂಗಕ್ಕೆ ಆಧಾರ ನೀಡುವ ತಂತುಗಳ ಕಂತೆಯಿದು. ಇದು ಅಂಗದ ಕವಚದಿಂದ ಅಥವಾ ತಡಿಕೆಯಿಂದ ಹುಟ್ಟುತ್ತದೆ. ೨. ಸ್ಪಂಜು ರೂಪದ ಮೂಳೆಯ ಚೂರು. ಇಂತಹುದೇ ಇತರ ಚೂರುಗಳೊಡನೆ ಸೇರಿ ಮೂಳೆಯ ರಚನೆಗೆ ಆಧಾರವನ್ನು ಒದಗಿಸುತ್ತದೆ