ಕುಂಬಾರಗಿತ್ತಿಯರು ಮಡಕೆ ಮಾಡಲು ತೊಡಗುವುದನ್ನು ಮಣ್ಣು ಮಾಡುವುದು ಎನ್ನುವರು. ಉದಾ: "ಗಂಗಮ್ಮ ಮಣ್ಣು ಮಾಡಾಕಹತ್ಯಾಳಾ" "ಮಣ್ಣು ಮಾಡಕ ಕುಂದ್ರಬೇಕ್ರಿ" ಈ ಪದ ದಾವಣಗೆರೆ, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಬಳಕೆಯಲ್ಲಿದೆ.
">
ಮಣ್ಣೆತ್ತು
(ನಾ)
ಮಣ್ಣಿನಿಂದ ಮಾಡಿದ ಎತ್ತು, ಮಣ್ಣೆತ್ತಿನ ಅಮವಾಸೆಯಲ್ಲಿ ರೈತರು, ಕುಂಬಾರರ ಮನೆಯಿಂದ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ತಂದು ಜಗಲಿಯ ಮೇಲಿಟ್ಟು ಪೂಜಿಸುವರು, 'ಶೃಂಗೇರಿ' ಭಾಗದಲ್ಲಿ ಕಾರ್ತೀಕ ಶುದ್ಧ ಅಷ್ಟಮಿಯನ್ನು 'ಬಸವನ ಅಷ್ಟಮಿ' ಎಂಬ ಹೆಸರಿನಲ್ಲಿ ಮಣ್ಣೆತ್ತುಗಳನ್ನು ಪೂಜಿಸುವರು.
ಮರಗಲು ಗಡಿಗೆ
(ನಾ)
ಆನಿಕೆ ಗಡಿಗೆ, ಹಸಿ ಮಡಿಕೆಗಳನ್ನು ಆವಿಗೆಯಲ್ಲಿ ಕ್ರಮವಾಗಿ ಇಟ್ಟು ಸುಡಲು ಸಿದ್ಧಗೊಳಿಸುವಾಗ ಮೊದಲಿಗೆ ದೊಡ್ಡ - ದೊಡ್ಡ ಗುಡಾಣ, ಪಚೇಲಿ, ಕೊಡ ಮುಂತಾದ ಹಳೆಯ ಸುಟ್ಟ ಗಡಿಗೆಗಳನ್ನು ಹಸಿ ಮಡಕೆಗಳ ಆನಿಕೆಗಾಗಿ ಸಾಲಾಗಿ ಇಟ್ಟು ಜೋಡಿಸುವರು. ಆನಿಕೆಯಾಗಿ ಇಟ್ಟ ಹಳೆಯ ಸುಟ್ಟ ಮಡಿಕೆಗಳನ್ನು ಮರಗಲು ಗಡಿಗೆ ಎನ್ನುವರು. ಹಾವೇರಿ, ಬಳ್ಳಾರಿ ಜಿಲ್ಲೆ ಪ್ರದೇಶದಲ್ಲಿ ಈ ಪದ ಪ್ರಯೋಗದಲ್ಲಿದೆ. ಮರಗಲು ಗಡಿಗೆಯಾಗಿ ಕುಂಬಾರರು ಸಾಮಾನ್ಯವಾಗಿ ಒಡೆದ ಅರೆಒಡೆದ, ಮುಕ್ಕಾದ ಗಡಿಗೆಗಳನ್ನು ಉಪಯೋಗಿಸುವರು.
ಮರದಬ್ಬೆ
(ನಾ)
ತಿಗುರಿಯಿಂದ ಗೇಯುವಾಗ ಆಕೃತಿಗಳನ್ನು ನುಣ್ಣಗೆ ಮಾಡಲು ಉಪಯೋಗಿಸುವ ಮರದ ದಬ್ಬೆ.
ಮರಳು
(ನಾ)
ಉಸುಕು, ಹೊಯಿಗೆ, ಮರಳನ್ನು ಮಡಿಕೆ ಮಾಡುವ ಮಣ್ಣಿಗೆ ಬೆರೆಸುವರು ಇದರಿಂದ ಮಣ್ಣಿಗೆ ಬಿಗಿ ಬರುತ್ತದೆ. ಹಸಿ ಮಡಕೆಗಳು ಬೀಳುವದಿಲ್ಲ.
ಮರಿಗೆ
(ನಾ)
ಚಿಕ್ಕ ಮಣ್ಣಿನ ಪಾತ್ರೆ, ಆಹಾರ ಬೇಯಿಸಲು ಬಳಸುವರು. ದಕ್ಷಿಣ ಕರ್ನಾಟಕದಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ. ಕಟ್ಟಿಗೆಯಲ್ಲಿ ಕೂಡ ಮರಿಗೆ ಮಾಡುವರು.
ಎಲ್ಲರೂ ಹೆಣ್ಣು ಹೆತ್ತರೆ ಮಾರೆಮ್ಮ ಮರಿಗೆ ಹೆತ್ತಳು (ಗಾದೆ)
ಮಸಿ
(ನಾ)
ಆವಿಗೆಯ ಬೂದಿಯನ್ನು ಸೋಸಿದಾಗ ಹಿಟ್ಟಿನಂತೆ ಬೀಳುವ ಬೂದಿಗೆ ಮಸಿ ಎನ್ನುವರು. ಮಡಿಕೆ ತಟ್ಟುವಾಗ ಮಣ್ಣು ದರಗ ಇಲ್ಲವೆ ನೆಲಕ್ಕೆ ಮಡಿಕೆಗೆ ಅಂಟಿಕೊಳ್ಳದಿರಲೆಂದು ಅದನ್ನು ಕೆಳಗೆ ಹರಡುವರು.
ಗಾಣಗೇರ ಗಸಿ ಕುಂಬಾರಮಸಿ (ಗಾದೆ)
ಮಸಿಬಟ್ಟೆ
(ನಾ)
ಆವಿಗೆಯಿಂದ ಮಡಕೆಗಳನ್ನು ಹೊರತೆಗೆಯುವಾಗ ಅವು ಬಿಸಿ ಇರುವುದರಿಂದ ಕೈಯಲ್ಲಿ ಬಟ್ಟೆ ಹಿಡಿದುಕೊಂಡು ಮಡಿಕೆಗಳನ್ನು ಹೊರತೆಯುವರು ಆಗ ಕೈಯಲ್ಲಿ ಹಿಡಿದ ಬಟ್ಟೆಗಳಲಿ ಮಸಿ ತಾಗುವದು ಅದನ್ನೇ ಮಸಿ ಬಟ್ಟೆ ಎಂದು ಕರೆಯುವರು.
ಮಾಸಿನ ಕುಳ್ಳಿ
(ನಾ)
ಗಡಿಗೆ, ಚಿಕ್ಕಮಡಕೆ, ಹೆರಿಗೆಯಾದ ಮೇಲೆ ತಾಯಿಯ ಮಾಸವನ್ನು ಒಂದು ಮಡಿಕೆಯಲ್ಲಿ ಹಾಕಿ ನೆಲದಲ್ಲಿ ಹುಗಿಯಲು ಬಳಸುವ ಗಡಿಗೆಗೆ ಮಾಸಿನ ಕುಳ್ಳಿ ಎನ್ನುವರು.