ಮಡಿಕೆ ಮಾಡಲು ಬಳಸುವ ಬಿಳಿಮಣ್ಣು, ಚೈನಾಕ್ಲೇ - ಬಿಳಿಮಣ್ಣನ್ನು ಪಿಂಗಾಣಿ ಪಾತ್ರೆಗಳನ್ನು ತಯಾರಿಸಲು ಬಳಸುವರು. ಈ ಮಣ್ಣಿನಿಂದ ತಯಾರಿಸಿದ ವಸ್ತುಗಳು ಹೆಚ್ಚು ಗಟ್ಟಿಯಾಗಿರುವವು - ವಿದ್ಯುತ್ ನಿರೋಧಕ ವಸ್ತುಗಳನ್ನು ತಯಾರಿಸಲು ಈ ಮಣ್ಣನ್ನು ಬಳಸುವರು.
ಬೆಚ್ಚಗಡಿಗೆ
(ನಾ)
ಹೊಲಗದ್ದೆಗಳಲ್ಲಿ ಹಕ್ಕಿಗಳನ್ನು ಓಡಿಸಲು ಮತ್ತು ಪಕ್ಷಿಗಳು ಬರದಂತೆ ನಿವಾರಣೆಗಾಗಿ ನಿಲ್ಲಿಸುವ ಮನುಷ್ಯಮುಖದ ಮಣ್ಣಿನ ಗಡಿಗೆ, ಸಾಮಾನ್ಯವಾಗಿ ಹುಲ್ಲು ತುಂಬಿದ ಮನುಷ್ಯ ಆಕಾರದ ಬೊಂಬೆಯನ್ನು ಮಾಡಿ ಅದಕ್ಕೆ ಬೆಚ್ಚ ಗಡಿಗೆಯನ್ನು ಹಾಕುವರು. ಮತ್ತು ನೋಡಿದವರು ಹೆದರುವಂತೆ ಅದರ ಮುಖಕ್ಕೆ ಸುಣ್ಣ ಮತ್ತು ಕಾವಿ ಮಣ್ಣನ್ನು ಬಳೆಯುವರು. ನೋಡಿ - ಬೆದರುಗೊಂಬೆ.
ಬೆಡಗಿನ ಹಂಚು
(ನಾ)
ದಬ್ಬೆ ಹಂಚು, ದಂಬೆ ಹಂಚು (Ridge Tile) ಮಾಳಿಗೆಗೆ ಹೊದಿಸಲು ಬಳಸುವ ಹಂಚು. ಈ ಹಂಚುಗಳು 2-3 ಸೆಂ.ಮಿ. ದಪ್ಪ ಮತ್ತು ಸುಮಾರು 45 ಸೆಂ. ಮಿ. ಉದ್ದ ಇರುತ್ತವೆ.
ಬೆಣ್ಣೆಪಚೇಲಿ
(ನಾ)
ಬೆಣ್ಣೆ ಗಡಿಗೆ, ಮಜ್ಜಿಗೆ ಕಡೆಯುವಾಗ ಅದರಲ್ಲಿಯ ಬೆಣ್ಣೆಯನ್ನು ತೆಗೆದಿಡಲು ಬಳಸುವ ಅಗಲ ಬಾಯಿಯ ಗಡಿಗೆ.
'ಬೆಣ್ಣೆಯ ಮಡಕೆಯಲ್ಲಿ ಕಿಚ್ಚು ತುಂಬಿ ಉರಿವು ತಿದ್ದುದ ಕಂಡೆ ಕಿಚ್ಚುಕರಗಿ ಬೆಣ್ಣೆ ಉಳಿಯಿತ್ತು' (ಮೋಳಗಿ ಮಾರಯ್ಯ)
ಬೆಣ್ಣೆಯ ಬೋಗುಣಿ
(ನಾ)
ಬೆಣ್ಣೆಯನ್ನು ಶೇಖರಿಸಿಡಲು ಮಾಡಿದ ವಿಶೇಷ ಪಾತ್ರೆ. ಬಾಯಿ ಅಗಲವಾಗಿರುತ್ತದೆ.
ಬೆದರುಗೊಂಬೆ
(ನಾ)
ಬೆಚ್ಚಗಡಿಗೆ, ರೈತರು ಪಶು - ಪಕ್ಷಿಗಳನ್ನು ಓಡಿಸಲು ಹೊಲದಲ್ಲಿ ಒಂದು ಕೋಲಿಗೆ ಗಡಿಗೆಯನ್ನು ಬೋರಲಾಗಿ ಸಿಕ್ಕಿಸಿ ಅದಕ್ಕೆ ಅಂಗಿ ತೊಡಿಸಿ ಮನುಷ್ಯನ ಆಕಾರ ಕೊಡುವರು.
ಬೆಳಕಿಂಡಿ
(ನಾ)
ಬಾದಾಳ, ಗವಾಕ್ಷ, ಕಿಟಕಿ, ಬೆಳಕು ಮತ್ತು ಗಾಳಿ ಬರಲು ಮಾಳಿಗೆಯ ಮೇಲೆ ಮಾಡಿದ ಕಿಂಡಿ ಮಣ್ಣಿನ ಮಾಳಿಗೆಯ ಮೇಲೆ ಒಡೆದ ಮಡಿಕೆಯ ಕಂಠಗಳನ್ನು ಬೆಳಕಿಂಡಿಗಾಗಿ ಬಳಸುವರು.
ಬೇಲ್ ಪಟ್ಟಿ
(ನಾ)
ಮಡಿಕೆಗಳನ್ನು ಅಂದಗೊಳಿಸಲು ಬಳಸುವ ಬಿದುರಿನ ಚಿಕ್ಕ ತುಂಡು. ಇದಕ್ಕೆ ರೇಖಾಪಟ್ಟಿ ಎಂದೂ ಕರೆಯುವರು.
ಬೇವಿನಕುಳ್ಳಿ
(ನಾ)
ಮಣ್ಣಿನ ಪಾತ್ರೆ ಯುಗಾದಿ ಹಬ್ಬದಂದು ಬೇವನ್ನು ಕುಡಿಯಲು ಬಳಸುವರು.
ಬೇವಿನಸ್ವಾದಿ
(ನಾ)
ವತ್ತಲ - ಗಡಿಗೆ, ಯುಗಾದಿ ಹಬ್ಬದ ದಿನ ರೈತರು ನೀರು ಕಾಯಿಸುವ ಗಡಿಗೆಯನ್ನು ತಂದು ಅದರಲ್ಲಿ ನೀರು ತುಂಬಿ, ಬೇವಿನ ಎಲೆಗಳನ್ನು ಹಾಕಿ, ನೀರನ್ನು ಕಾಯಿಸಿ ಸ್ನಾನ ಮಾಡಲು ಬಳಸುವ ಗಡಿಗೆಗೆ ಬೇವಿನ ಸ್ವಾರಿ ಎನ್ನುವರು. ಬೆಳಗಾವಿ ಜಿಲ್ಲೆಯಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದೆ.