ಊದಬತ್ತಿ, ಮೇಣದಬತ್ತಿ ಹಚ್ಚಿ ಇಡಲು ಮಾಡಿದ ಸಾಧನ, ಪಿಂಗಾಣಿ ವಸ್ತುಗಳಲ್ಲಿ ಇದನ್ನು ಕಾಣಬಹುದು.
ಬಲಗೊಂಬಿ
(ನಾ)
ಮಣ್ಣಿನ ಗೊಂಬೆ, ಅರಿಶಿಣ - ಕುಂಕುಮ ಸವರಿ ನಿವಾಳಿಸಿ ಊರ ಹೊರಗೆ ಒಗೆಯುವ ನಿವಾರಣೆ ಗೊಂಬಿ, ಮಾಂತ್ರಿಕರು ಬಳಸುವರು.
ಬಸಿಪೈಪು
(ನಾ)
ಮಣ್ಣಿನ ಪೈಪು, ಸುಮಾರು ಮೂವತ್ತು ಸೆಂ.ಮೀ.ನಿಂದ ಎರಡು ಮೀ. ಉದ್ದದವರೆಗೂ ಇದನ್ನು ತಯಾರಿಸುವರು. ರೈತರು ಭೂಮಿಯಲ್ಲಿ ಜವಳು ಹತ್ತಿದಾಗ ನೀರನ್ನು ಹರಿಬಿಡಲು ಬಳಸುವರು. ದಾವಣಗೆರೆ, ಶಿವಮೊಗ್ಗಾ, ರಾಯಚೂರ ಜಿಲ್ಲೆಗಳ ರೈತರು ತಮ್ಮ ಗದ್ದೆಗಳಲ್ಲಿ ಬಸಿ ಪೈಪನ್ನು ಹೆಚ್ಚಾಗಿ ಬಳಸುವರು.
ಬಾಣಲಿ
(ನಾ)
ಬಾಳ್ಳಿ, ಬಾಂಡಲೆ, ತಟ್ಟೆ, ಕಬ್ಬಿಣ ಬುಟ್ಟಿ ಆಕಾರದಲ್ಲಿರುವ ಮಣ್ಣಿನ ಪಾತ್ರೆ, ಆಹಾರ ಪದಾರ್ಥಗಳನ್ನು ಕರಿಯಲು ಬಳಸುತ್ತಿದ್ದು ಈ ಪಾತ್ರೆ ಕ್ರಮೇಣವಾಗಿ ಕಣ್ಮರೆಯಾಗುತ್ತಲಿದೆ.
ಬ್ಯಾಕೋಲು
(ನಾ)
ಆವಿಗೆ ಸುಡುವಾಗ ಉರುವಲನ್ನು ಒಳಗೆ ತಳ್ಳಲು ಮತ್ತು ಕಿಚ್ಚನ್ನು ತಳ್ಳಲು ಬಳಸುವ ಕಟ್ಟಿಗೆಯ ಕೋಲು. ನೋಡಿ - ಕವೆಗೋಲು
ಬಾದಾಳ
(ನಾ)
ಬಯಲು ಸೀಮೆಯಲ್ಲಿ ಮಣ್ಣಿನ ಮಾಳಿಗೆಯ ಮನೆಗಳು ಒತ್ತೊತ್ತಾಗಿರುತ್ತವೆ. ಕಿಟಕಿಗಳೇ ಇರುವುದಿಲ್ಲ. ಗಾಳಿ ಬೆಳಕು ಮಾಳಿಗೆಯಲ್ಲಿಟ್ಟ ಬಾದಾಳಿದಿಂದಲೇ ಬರಬೇಕು. ನೋಡಿ - ಬೆಳಕಿಂಡಿ.
'ಬಲುಗಜಕ್ಕೆ ಬಾದಾಳದಲ್ಲಿ ಹಾದಿಯುಂಟೆ?' (ಬಿಬ್ಬಿ ಬಾಚಯ್ಯ)
ಬಾದಾಳ ಹಂಚು
(ನಾ)
ಬಾದಾಳಕ್ಕೆ ಮುಚ್ಚುವ ಹಂಚು ಮಳೆ ಬರುವಾಗ ನೀರು ಒಳಗೆ ಬೀಳದಿರಲೆಂದು ಮಡಕೆಯ ಒಡೆದ ಬೋಕಿಗಳನ್ನು ಬಾದಾಳದ ಬಾಯಿಗೆ ಮುಚ್ಚುವರು.
ಬಾನ
(ನಾ)
ಗಾತ್ರಕ್ಕೆ ತಕ್ಕಂತೆ ಒಂದರ ಮೇಲೊಂದು ಓತಿಟ್ಟ ಪಾತ್ರೆ ಸಾಲು ಅಡಕಲು ಗಡಿಗೆ.
ಬಾನಿ
(ನಾ)
ಬಾನೆ, ಕಲಗಂಚು, ಅಗಲ ಬಾಯಿಯ ಪಾತ್ರೆ, ಮಣ್ಣಿನ ಬಾನಿಯನ್ನು ಹಳ್ಳಿಗಳಲ್ಲಿ ಮುಸುರಿ ಬಾನಿಯಾಗಿ ದನಕರುಗಳಿಗೆ ನೀರು ಕುಡಿಯಲು, ಹೀಗೆ ಬೇರೆ ಕೆಲಸಗಳಿಗೆ ಬಳಸುವರು. ಬಾನಿಯನ್ನು ದುಂಡಾಕೃತಿ ಚೌಕಾಕೃತಿ, ಆಯತ, ಬಕೆಟ್ ಆಕೃತಿಯಲ್ಲಿ ಕೈಯಿಂದಲೆ ತೀಡಿ ಮಾಡುವರು.
ಬಿಂದಿಗೆ
(ನಾ)
ಮಣ್ಣಿನ ಚಿಕ್ಕ ಕೊಡ, ಹಳ್ಳಿಗಳಲ್ಲಿ ಕೆರೆ - ಬಾವಿಗಳಿಂದ ನೀರು ತರಲು ಸಾಮಾನ್ಯವಾಗಿ ಬಡವರು, ಬಿಂದಿಗೆ ಮಣ್ಣಿನ ಕೊಡಗಳನ್ನು ಬಳಸುವರು. ಮಣ್ಣಿನ ಕೊಡಗಳಲ್ಲಿ ಚಿಕ್ಕ ಕೊಡಕ್ಕೆ ಬಿಂದಿಗೆ ಎಂದು ಹೆಸರು. ಇತ್ತೀಚಿನ ದಿನಗಳಲ್ಲಿ ತಾಮ್ರದ, ತಗಡಿನ ಮತ್ತು ಪ್ಲಾಸ್ಟಿಕ್ ಬಿಂದಿಗೆಗಳು ಹೆಚ್ಚು ಬಳಕೆಯಲ್ಲಿವೆ.
'ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ ತಾರೆ ಬಿಂದಿಗೆಯ' (ಪುರಂದರದಾಸರು)
'ಬಿಂದಿಗೆ ತೆಗೆದಾಳೋ ಬಾವಿ ನೀರಿಗೆ ಹೊಂಟಾಳೋ' (ಜಾನಪದ)
ಬಿಂದಿಗೆ ಒಡೆದರೆ ಹಂದಿಗೆ ನೀರು ಎಲ್ಲಿ? (ಗಾದೆ)
ಹೋಗ್ತಾ ಬಾಣಂತಿ ಬರತಾ ಬಸುರಿ (ಒಗಟು)