ಸ್ವಚ್ಛ ಮಾಡಿದ ಮಣ್ಣಿಗೆ ನೀರನ್ನು ಹಾಕಿ ಕೆಲ ಘಂಟೆಗಳವರೆಗೆ ನೆನೆಯಲು ಬಿಟ್ಟು ಅದು ನೆನೆದ ಮೇಲೆ ಅದನ್ನು ಕಾಲಿನಿಂದ ತುಳಿದು ಹದ ಮಾಡಿ ಒಂದೆಡೆ ಒಟ್ಟುವರು.
ತೆರೆ ಎತ್ತು
(ಕ್ರಿ)
ತಿಗುರಿಯ ಹಣೆಗೆ ಹಾಕಿದ ಮಣ್ಣನ್ನು ಮಡಿಕೆ ಮಾಡಲು ಮೇಲೆತ್ತುವ ಕ್ರಿಯೆ.
ತೆರೆಬಡಿ
(ಕ್ರಿ)
ತಿಗುರಿಯ ಹಣೆಯ ಮೇಲೆ ಅರಲನ್ನು ಒಟ್ಟುವುದು. ತಿಗುರಿಯನ್ನು ಹೂಡಿದ ಮೇಲೆ ಅದನ್ನು ನಿಧಾನಕ್ಕೆ ಕೈಯಿಂದ ತಿರುಗಿಸುತ್ತ, ಹಿಡಿ, ಹಿಡಿ, ಅರಲನ್ನು ತೆಗೆದುಕೊಂಡು ಅದರ ಹಣೆಯ ಮೇಲೆ ಬಡಿದು ಅರಲನ್ನು ಒಟ್ಟುವ ಕ್ರಿಯೆಗೆ ತೆರೆ ಬಡೆಯುವುದು ಎನ್ನುವರು.
ತೋಯಿಸಿದ ಅರಿವೆ ಕೊರಡು
(ನಾ)
ಹಸಿಬಟ್ಟೆಯುಳ್ಳ ಮರದ ಹಲಗೆ, ಸೊಳದಿಂದ ಮಡಕೆ ತಟ್ಟುವಾಗ ಆಗಾಗ್ಗೆ ಸೊಳವನ್ನು ಹಸಿಮಾಡಿಕೊಳ್ಳಲು ಪಕ್ಕದಲ್ಲಿ ಇಟ್ಟುಕೊಳ್ಳುವ ಹಸಿಬಟ್ಟೆಯುಳ್ಳ ಮರದ ಹಲಗೆ. ಇದು ಸುಮಾರು 15 ಸೆಂ.ಮೀ. ದಪ್ಪವಿರುತ್ತದೆ. ಉದ್ದ 10 ಸೆಂ. ಮೀ. ಅಗಲ 8 ಸೆಂ. ಮೀ. ದಪ್ಪವಿರುತ್ತದೆ. ಅದರ ಮೇಲೆ ಎರಡು ಮೂರು ಮಡಿಕೆ ಮಾಡಿ ತೋಯಿಸಿದ ಬಟ್ಟೆಯನ್ನು ಇಟ್ಟಿರುತ್ತಾರೆ.
ಥಾಲಿ
(ನಾ)
ಗಿಂಡಿ, ಸಣ್ಣ ಮಕ್ಕಳು ನೀರು ಕುಡಿಯಲು ಬಳಸುವ ಚಿಕ್ಕ ಪಾತ್ರೆ. ಹಾಲು ಮೊಸರು ಹಾಕಿ ಇಡಲು ಉಪಯೋಗಿಸುವರು.
ರೊಕ್ಕದ ಗಡಿಗೆ, ಹುಂಡಿ ಗಡಿಗೆ, ಬಾಯಿ ಮುಚ್ಚಿಮಾಡಿದ ಗಡಿಗೆ ಅದರ ನೆತ್ತಿಯ ಮೇಲೆ ನಾಣ್ಯ ಹೋಗುವಷ್ಟು ರಂಧ್ರ ಮಾಡಲಾಗಿರುವುದು. ಮನೆಯಲ್ಲಿ ಮಕ್ಕಳು ಮತ್ತು ಹೆಂಗಸರು ದುಡ್ಡನ್ನು ಉಳಿತಾಯ ಮಾಡಲು ದಬ್ಬಿಗಡಿಗೆಯಲ್ಲಿ ಹಾಕುವರು. ಅದು ಪೂರ್ತಿ ತುಂಬಿದ ಮೇಲೆ ಇಲ್ಲವೆ ಹಣದ ಅವಶ್ಯಕತೆ ಬಿದ್ದಾಗ ಅದನ್ನು ಒಡೆಯುವರು.
ನಳಿಕೆ - ಜೋಡಿಸಿದ ಮಡಿಕೆ, ಐರಾಣಿಗಡಿಗೆಗಳಲ್ಲಿ ಕೊಡುವ ಮಡಕೆಗಳಲ್ಲಿ ಇದೂ ಒಂದು. ಮದುವೆ ಸಮಾರಂಭಗಳಲ್ಲಿ ಇದರಲ್ಲಿ ಹಾಲನ್ನು ಹಾಕಿಕೊಂಡು ಎರೆಯಲು ಉಪಯೋಗಿಸುವರು. ಇದು ದಕ್ಷಿಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಬಳಕೆಯಲ್ಲಿದೆ.
ಧಾರಾಪಾತ್ರೆ
(ನಾ)
ಚಿಕ್ಕ ಗಡಿಗೆ, ಈಶ್ವರ ಲಿಂಗಕ್ಕೆ ಜಲಾಭಿಷೇಕ ಮಾಡಲು ಇದನ್ನು ಬಳಸುವರು. ಈ ಮಡಿಕೆಯಲ್ಲಿ ನೀರು ತುಂಬಿ ಈಶ್ವರ ಲಿಂಗದ ಮೇಲೆ ಸ್ವಲ್ಪ ಅಂತರದಲ್ಲಿ ತೂಗುಬಿಡುವರು. ಮಡಿಕೆಯ ತಳದಲ್ಲಿ ಒಂದು ಚಿಕ್ಕ ರಂಧ್ರಮಾಡಿರುವುದರಿಂದ ನೀರು ಲಿಂಗದ ಮೇಲೆ ಧಾರೆಯಾಗಿ ನಿರಂತರ ಬೀಳುವುದು.