logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ತಸ್ತಿ
(ನಾ)
ಪಚೇಲಿ, ನೀರು ಕಾಯಿಸುವ ಗಡಿಗೆ, ಇದರಬಾಯಿ ಅಗಲವಿದ್ದು ತಳದಪ್ಪವಿರುತ್ತದೆ. ನೋಡಿ - ಪಚೇಲಿ

ತಿಗುರಿ
(ನಾ)
ತಿಹುರಿ, ತಿಗರಿ, ತಿರುಗುಣಿ ಕುಂಬಾರನ ಚಕ್ರ, ಕುಂಬಾರನ ಗಾಲಿ ಕುಂಬಾರಿಕೆಯ ಸಾಧನ ಸಲಕರಣೆಗಳಲ್ಲಿ ತಿಗುರಿ ಮುಖ್ಯ. ತಿಗರಿಯ ಹಣೆ ಮತ್ತು ಕೈಗಳನ್ನು ಕಟ್ಟಿಗೆಯಿಂದ ಮಾಡಿಸಿ, ತಮಗೆ ಬೇಕಾದ ಅಳತೆಗೆ ಕುಂಬಾರರು ಮಣ್ಣಿನಿಂದ ತಿಗರಿಯನ್ನು ಮಾಡಿಕೊಳ್ಳುವರು. ಉತ್ತರ ಪ್ರದೇಶ್, ಬಿಹಾರ್, ರಾಜಾಸ್ಥಾನ, ಪಂಜಾಬದ ಕೆಲಭಾಗಗಳಲ್ಲಿ ಕಲ್ಲಿನ ಚಕ್ರದ ಬಳಕೆ ಕೂಡ ಇದೆ. ಪ್ರಾಚ್ಯ ವಿದ್ವಾಂಸರ ಪ್ರಕಾರ ವಿಶ್ವಕ್ಕೆ ಮೊದಲು ತಿಗುರಿಯನ್ನು ಪರಿಚಯಿಸಿದವರು ಸುಮೇರಿಯನ್-ರು. ಈಜಿಪ್ಟಿಯನ್ನರು ತಮ್ಮ ಜನಾಂಗದ ಆರಾಧ್ಯದೇವರಾದ ಶನುಮ್-ನು ತಿಗರಿಯನ್ನು ಕುಂಬಾರನಿಗೆ ಕೊಟ್ಟನೆಂದು ನಂಬುವರು. 'ದಂಡಭ್ರಹ್ಮಂ ಕುಲಾಲ ಚಕ್ರದೋಳ್' (ಅಗ್ಗಳದೇವ) 'ತಿರುಗತದ ತಿಗರಿ ಹರವಿ, ಗಡಗಿ ಮಡಕಿ ಹಡೀತದ ಕುಂಬಾರನ ತಿಗುರಿ' (ಬೇಂದ್ರೆ)

ತಿಗುರಿ ಕಣ್ಣು
(ನಾ)
ತಿಗುರಿಯ ಹಣೆಯಲ್ಲಿ ಕೂಡಿಸಲಾದ ಬೆಣಚುಕಲ್ಲಿನಲ್ಲಿ ಗೋಲಾಕಾರವಾಗಿ ಮಾಡಲಾದ ತಗ್ಗು ಗುಬ್ಬಕಲ್ಲು ನೋಡಿ.

ತಿಗುರಿ ಗುಳಿ
(ನಾ)
ತಿಗುರಿಯ ಸುತ್ತಿನಲ್ಲಿ ಮಾಡಿರುವ ಒಂದು ಒಂದುವರೆ ಸೆ. ಮೀ. ಅಗಲದ ಒಂದು ಸೆ.ಮಿ. ಆಳದ ಗುಳಿ ಅದರಲ್ಲಿ ಕೋಲನ್ನು ಇಟ್ಟು ತಿರುಗಿಸಿ ತಿಗುರಿಯನ್ನು ಚಾಲು ಮಾಡುವರು.

ತಿಗುರಿ ಕೋಲು
(ನಾ)
ಕುಂಬಾರಗೋಲು, ತಿಗರಿ ಬಡಿಗೆ, ತಿಗುರಿಯನ್ನು ತಿರುಗಿಸಲು ಬಳಸುವ ಬಿದರಿನ ಕೋಲು. ಇದು ಸುಮಾರು ಒಂದುವರೆಯಿಂದ ಎರಡು ಮೀಟರ್ ಉದ್ದವಿರುವುದು. 'ಪಂದಿ ತಿರುಗುವ ಪದದೊಳ್ ಕೇ ಲಂ ಮಾಡುವ ತಿಗುರಿಯ ಕೋಲಂತೆ' (ಮಲ್ಲಿಕಾರ್ಜುನ)

ತಿಗುರಿ ಗೂಟ
(ನಾ)
ಶೂಲ, ತಿಗರಿ ತಿರುಗಿಸಲು, ನೆಲದಲ್ಲಿ ಹುಗಿದ ಕಟ್ಟಗೆಯ ಗೂಟ. ಇದನ್ನು ಕಟ್ಟಿಗೆಯಿಂದ ಮಾಡಿದ್ದು, ಇದರ ತುದಿ ಭಾಗದಲ್ಲಿ ಮೊನಚಾಗಿದ್ದು, ತಳ ಭಾಗದಲ್ಲಿ ದಪ್ಪಾಗಿ ಇರುವುದು. ಇದು ಸುಮಾರು ಒಂದು ಮೀಟರ್ ಉದ್ದವಾಗಿದ್ದು, 45 ಸೆಂ.ಮೀ.ನಷ್ಟು ನೆಲದ ಮೇಲ್ಗಡೆ ಇರುವಂತೆ ನೆಲದಲ್ಲಿ ತಗ್ಗುತೆಗೆದು ಭಧ್ರಪಡಿಸುವರು, ತಿಗರಿ ಹಾಕುವಾಗ ಗೂಟದ ಮೊನಚಾದ ತುದಿಯನ್ನು ತಿಗರಿ ಕಲ್ಲಿನಲ್ಲಿ ಇಟ್ಟು ತಿಗರಿ ತಿರುಗಿಸುವರು.

ತಿಗುರಿ ತಗಡು
(ನಾ)
ತಿಗುರಿಯ ಹಣೆಯ ಪೀಠದ ಮೇಲೆ ಅರಲನ್ನು ಬಡಿದು, ಅದನ್ನು ದುಂಡಗೆ ಮಾಡಲು ಆಚೆ ಈಚೆ ಅರಲನ್ನು ಸವಲ ತೆಗೆಯಲು ಬಳಸುವ ತಗಡಿನ ತುಂಡು.

ತಿಗುರಿ ಹಣೆ
(ನಾ)
ತಿಗರಿಯ ಮಧ್ಯಭಾಗದಲ್ಲಿ ಗೋಲಾಕಾರವಾಗಿರುವ ಕಟ್ಟಿಗೆಯ ಪೀಠ. ಇದರ ಮೇಲೆ ಹದ ಮಾಡಿದ ಮಣ್ಣನ್ನು (ಅರಲನ್ನು) ಬಡಿದು ಮಡಕೆಗಳನ್ನು ಮಾಡುವರು.

ತಿಗುರಿ ಹೂಡು
(ಕ್ರಿ)
ತಿಗುರಿಯನ್ನು ಗೂಟಕ್ಕೆ ಹಾಕಿ ಅದನ್ನು ತಿರುಗಿಸಲು ಆರಂಭಿಸುವುದು.

ತೀಡು
(ಕ್ರಿ)
ಕೈಯಿಂದ ಮಡಕೆಗಳನ್ನು ಮಾಡುವ ಕ್ರಿಯೆ, ಹದಮಾಡಿದ ಅರಲನ್ನು ಸುರುಳಿ ಮಾಡಿ, ಜಜ್ಜುವ ಕಲ್ಲಿನಿಂದ ಜಜ್ಜಿ ನಂತರ ಅಚ್ಚಿನಲ್ಲಿಟ್ಟು ಒಂದು ಅರಿವೆ ಪಕಡಿಯಿಂದ ತಯಾರಿಸಬೇಕಾದ ಪಾತ್ರೆ ಸಿದ್ಧವಾಗುವವರಿಗೆ ತೀಡುವ ಕ್ರಿಯೆಗೆ ತೀಡುವುದು ಎನ್ನುವರು. ಹೀಗೆ ತೀಡಿದ ಪಾತ್ರೆಗೆ ಬೋಸಿ ಎನ್ನುವರು. ಇದಕ್ಕೆ ಕಂಠ ಇರುವುದಿಲ್ಲ. ಸಾಮಾನ್ಯವಾಗಿ ಕುಂಬಾರಗಿತ್ತಿಯರು ಚಿಕ್ಕ, ಚಿಕ್ಕ ಮಣ್ಣಿನ ಪಾತ್ರೆಗಳನ್ನು ಕೈಯಿಂದ ತೀಡಿ ಸಿದ್ಧಗೊಳಿಸುವರು.


logo